ಅನುದಿನ ಕವನ-೮೧೫, ಕವಿ: ಎಚ್ ಎನ್ ಈಶಕುಮಾರ್, ಮೈಸೂರು

ಜಗವ ಅರಿಯಲು
ಬಂದೇವ ಇಲ್ಲಿಗೆ
ಮುಂಜಾವದ ಹಸಿ
ಕಿರಣಗಳ ಸಲ್ಲಾಪಕೆ
ಹೆಜ್ಜೆಯ ಸಪ್ಪಳದ
ಉಲ್ಲಾಸದ ಜೊತೆಗೆ
ಕೂಡಿದ ಮಾತು

ಇಲ್ಲ ಜಗವ ಮರೆಯಲು
ಬಂದೆವು ಎಂದು ಮಾತು
ನಿಲ್ಲಿಸಿದೆ

ಮುಂದುವರೆದ ಹೆಜ್ಜೆಗೆ
ಹಾದಿ ಬದಿಯಲಿ
ಯಾವ ಗುರುತು ಉಳಿದಿರಲಿಲ್ಲ
ಮಂಜಿಗೂ ಮುಂಜಾವಿಗೂ
ಯಾವುದೋ ಮುಗಿಯದ
ಕಥೆಯೊಂದು ಆರಂಭವಾಗುವ
ಮುನ್ಸೂಚನೆ

ಯಾವ ಊರಿನ ಕಥೆಯೋ
ಮತ್ತೆ ಕೇಳಿಬಂತು ಮಾತು
ಹಿಂದಿರುಗಿ ಬರುವಾಗ
ಕೇಳೋಣ ಬಾ ಎಂದು
ಮತ್ತೊಮ್ಮೆ ಮಾತು ನಿಲ್ಲಿಸಿ
ನಡೆದು ಬಿಟ್ಟೆ!


-ಎಚ್ ಎನ್ ಈಶಕುಮಾರ್, ಮೈಸೂರು
*****