ಡಾ.ಭರಣಿ ವೇದಿಕೆಯಿಂದ ವಿಶ್ವ ರಂಗಭೂಮಿ ದಿನಾಚರಣೆ: ನಾಡೋಜ ಬೆಳಗಲ್ಲು ವೀರಣ್ಣರಿಗೆ ಪದ್ಮ ಪ್ರಶಸ್ತಿ ಶೀಘ್ರ ಲಭಿಸಲಿ

ಬಳ್ಳಾರಿ, ಮಾ. 27: ಏಳು ದಶಕಗಳಿಂದ ರಂಗಭೂಮಿ, ತೊಗಲುಗೊಂಬೆ ಕಲಾಪ್ರಕಾರಕ್ಕೆ ದುಡಿಯುತ್ತಿರುವ
ಅಂತರಾಷ್ಟ್ರೀಯ ಹಿರಿಯ ಕಲಾವಿದ ನಾಡೋಜ ಬೆಳಗಲ್ಲು ವೀರಣ್ಣ ಅವರಿಗೆ ಕೇಂದ್ರ ಸರಕಾರ ಈಗಾಗಲೇ ಪದ್ಮ ಪ್ರಶಸ್ತಿ ನೀಡಿ ಗೌರವಿಸಬೇಕಿತ್ತು ಎಂದು ಹಿರಿಯ ಪತ್ರಕರ್ತ, ಸಾಂಸ್ಕೃತಿಕ ಸಂಘಟಕ ಸಿ.ಮಂಜುನಾಥ್ ಅವರು ಅಭಿಪ್ರಾಯ ಪಟ್ಟರು.
ಇಲ್ಲಿನ ಡಾ. ಸುಭಾಷ್ ಭರಣಿ ಸಾಂಸ್ಕೃತಿಕ ವೇದಿಕೆ ಮತ್ತು ಸಂಸ್ಕೃತಿ ಪ್ರಕಾಶನದ
ಸಹಯೋಗದಲ್ಲಿ ಸೋಮವಾರ ವಿದ್ಯಾನಗರದಲ್ಲಿರುವ ರಂಗ ಕಲಾವಿದ ಎಎಂಪಿ‌ ವೀರೇಶಸ್ವಾಮಿ‌ ಅವರ ಮನೆಯಂಗಳದಲ್ಲಿ ಜರುಗಿದ ವಿಶಿಷ್ಟ, ವಿನೂತನ ಸರಳ ವಿಶ್ವ ರಂಗಭೂಮಿ ದಿನಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.


ಭಾರತದ ಸಾಂಸ್ಕೃತಿಕ, ರಂಗ ಪರಂಪರೆಯನ್ನು ತಮ್ಮ ಶ್ರೀ ರಾಮಾಂಜನೇಯ ತೊಗಲುಗೊಂಬೆ ಮೇಳದ ಮೂಲಕ ವಿದೇಶಗಳಲ್ಲಿ ಮೊಳಗಿಸಿದ ಕೀರ್ತಿ ನಾಡೋಡ ಬೆಳಗಲ್ಲು ವೀರಣ್ಣ ಅವರದು. ರಾಜ್ಯ, ರಾಷ್ಟ್ರ‌ಮಟ್ಟದ ಪ್ರಶಸ್ತಿ ಪುರಸ್ಕಾರಗಳ ಮೂಲಕವೂ ಅಖಂಡ ಬಳ್ಳಾರಿ ಜಿಲ್ಲೆಗೆ , ಕನ್ನಡ ನಾಡಿಗೆ ಕೀರ್ತಿ ತಂದಿರುವ ವೀರಣ್ಣ ಅವರಿಗೆ ಪದ್ಮ ಪ್ರಶಸ್ತಿ ಬಂದರೆ ಇಡೀ‌ ನಾಡು‌ ಸಂಭ್ರಮಿಸುತ್ತದೆ ಎಂದರು.
ನಾಡೋಜ ಬೆಳಗಲ್ಲು ವೀರಣ್ಣ ಅವರು ಮಾತನಾಡಿ
ಕಳೆದ 18 ವರ್ಷಗಳಿಂದ ಪ್ರತಿ ವರ್ಷವೂ ವಿಶ್ವ ರಂಗಭೂಮಿ ದಿನವನ್ನು ವಿಶಿಷ್ಟವಾಗಿ ಆಚರಿಸುತ್ತಿರುವ
ಭರಣಿ ವೇದಿಕೆ, ಸಂಸ್ಕೃತಿ ಪ್ರಕಾಶನದ ಕಾರ್ಯವನ್ನು ಶ್ಲಾಘಿಸಿದರು.


ರಂಗಭೂಮಿಗೆ ಅನುಪಮ ಸೇವೆ ಸಲ್ಲಿಸಿದ ಅವಳಿ ಜಿಲ್ಲೆಯ ಹಿರಿಯ ಹಾಗೂ ಯುವ ರಂಗ ಕಲಾವಿದರು, ರಂಗ ಕರ್ಮಿಗಳನ್ನು ಗುರುತಿಸಿ ಅವರವರ ಮನೆಗಳಿಗೆ ತೆರಳಿ ಕುಟುಂಬ ಸದಸ್ಯರು, ಬಂಧು ಮಿತ್ರರ ಸಮ್ಮುಖದಲ್ಲಿ ಸತ್ಕರಿಸಿ ಗೌರವಿಸುವುದು ಮಾದರಿ ಕಾರ್ಯ ಎಂದರು.
ಹಿರಿಯ ಸಾಹಿತಿ, ಡಾ. ಸುಭಾಷ್ ಭರಣಿ ಸಾಂಸ್ಕೃತಿಕ ವೇದಿಕೆ ಗೌರವಾಧ್ಯಕ್ಷ ಡಾ. ವೆಂಕಟಯ್ಯ ಅಪ್ಪಗೆರೆ ಅವರು ಮಾತನಾಡಿ ಎಎಂಪಿ ವೀರೇಶಸ್ವಾಮಿ ಅವರು ಪ್ರತಿಭಾವಂತ ಕಲಾವಿದರು. ಇವರ ಮನೆಗೆ ಬಂದು ಸತ್ಕರಿಸುತ್ತಿರುವುದು ನಮಗೆ ಸಂತೋಷ, ಹೆಮ್ಮೆ ತಂದಿದೆ ಎಂದರು.


ಮತ್ತೋರ್ವ ಹಿರಿಯ ಸಾಹಿತಿ ಗಂಗಾಧರ ಪತ್ತಾರ ಅವರು ಎಎಂಪಿ ವೀರೇಶಸ್ವಾಮಿ ಅವರ ರಂಗಭೂಮಿ‌ ಸಾಹಿತ್ಯ ಸೇವೆಯನ್ನು ಕೊಂಡಾಡಿದರು. ವೀರೇಶಸ್ವಾಮಿ ಅವರು ವಿಶ್ವ ರಂಗಭೂಮಿ ದಿನಾಚರಣೆ ಕುರಿತು ಬರೆದ ಕವನವನ್ನು‌ ವಾಚಿಸಿದರು.
ಇದೇ ಸಂದರ್ಭದಲ್ಲಿ ರಂಗ ಕಲಾವಿದ, ಉಪನ್ಯಾಸಕ ಎಎಂಪಿ ವೀರೇಶಸ್ವಾಮಿ ಅವರನ್ನು ಗಣ್ಯರು ಸನ್ಮಾನಿಸಿ ಗೌರವಿಸಿದರು.
ಸನ್ಮಾನಕ್ಕೆ ಉತ್ತರಿಸಿದ ವೀರೇಶಸ್ವಾಮಿ ಅವರು ಮನೆಯ ಅಂಗಳಕ್ಕೆ ಬಂದ ರಂಗ ಗೌರವ ನನ್ನನ್ನು ಮತ್ತಷ್ಟು ಉತ್ತೇಜಿಸಿದೆ. ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂದು ಭಾವುಕರಾದರು.


ಕಾರ್ಯಕ್ರಮದಲ್ಲಿ ವಿಎಸ್ ಕೆ ವಿವಿ ನಾಟಕ ವಿಭಾಗದ ಉಪನ್ಯಾಸಕ ಅಣ್ಣಾಜಿ ಕೃಷ್ಣಾ ರೆಡ್ಡಿ, ಮಯೂರ ಕಲಾ ಸಂಘದ ಅಧ್ಯಕ್ಷ ಗಂಗಣ್ಣ, ರಂಗ‌ಕಲಾವಿದ
ಕೊಳಗಲ್ಲು ಜಗದೀಶ ಸ್ವಾಮಿ, ಡಾ. ಭರಣಿ ವೇದಿಕೆಯ ನಿರ್ದೇಶಕಿ ಸರಸ್ವತಿ ಎನ್ ಅಪ್ಪಗೆರೆ, ಶ್ರೀಮತಿ ಪಿ ಎಂ ಚೇತನಾ,  ಡಾ. ಬಾಬು, ಛಾಯಾಗ್ರಾಹಕ ಶ್ರೀರಾಮ್, ಕಲಾವಿದರ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.
*****