ಅನುದಿನ ಕವನ-೮೧೭, ಕವಿ: ಮನಂ, ಬೆಂಗಳೂರು ಕವನದ ಶೀರ್ಷಿಕೆ:ಬಿಕರಿ ಆಗುವವರು-ಆಗದವರು

ಎರಡು ವರ್ಷಗಳ ಹಿಂದೆ ಬಳ್ಳಾರಿಯಲ್ಲಿ ಕರ್ನಾಟಕ ಕಹಳೆ ಡಾಟ್ ಕಾಮ್ ನ್ನು ಅತ್ಯಂತ ಪ್ರೀತಿ ಹಾಗೂ ಪ್ರಾಂಜಲ ಮನಸ್ಸಿನಿಂದ ಲೋಕಾರ್ಪಣೆ ಗೊಳಿಸಿ ಹಾರೈಸಿದ್ದ ಸಾಹಿತಿ, ಸಂಶೋಧಕ, ಉನ್ನತ ಪೊಲೀಸ್ ಅಧಿಕಾರಿ ಶ್ರೀ ಎಂ.ನಂಜುಂಡಸ್ವಾಮಿ (ಮನಂ) ಅವರ ಜನುಮದಿನ ಇಂದು!  ಕಹಳೆ ಸಾಹಿತ್ಯ ಬಳಗ ಹಾಗೂ ಓದುಗ ದೊರೆಗಳ ಪರವಾಗಿ ಮಾಳವ ದೊರೆಗೆ ಗೌರವ ಪೂರ್ವಕ ಹುಟ್ಟುಹಬ್ಬದ ಶುಭಾಶಯಗಳು🍀🎂🌺🍀🎂💐🍀🌹 ಹುಟ್ಟುಹಬ್ಬದ ಅಂಗವಾಗಿ ಕವಿಗಳ ‘ಬಿಕರಿ ಆಗುವವರು-ಆಗದವರು’ ಕವಿತೆಯನ್ನು ಪ್ರಕಟಿಸುವ ಮೂಲಕ ಗೌರವಿಸುತ್ತಿದ್ದೇವೆ🍀🎂💐🍀🌹🍀💐🎂

(ಸಂಪಾದಕರು)


ಬಿಕರಿ ಆಗುತ್ತಿವೆ
ಬಿಕರಿ ಆಗುತ್ತಿವೆ
ಮೈ ಮನ ಮನುಷ್ಯರು

ಬಿಕರಿ ಆಗುತ್ತಿವೆ
ಬಿಕರಿ ಆಗುತ್ತಿವೆ
ಸಿದ್ಧಾಂತಗಳು ಸಿದ್ಧಾಂತಿಗಳು
ಸಿದ್ಧ ಪುರುಷರು

ಬಿಕರಿ ಆಗುತ್ತಿವೆ
ಬಿಕರಿ ಆಗುತ್ತಿವೆ
ಹೆಣ್ಣುಗಳು ಹೆಂಗಸರು ಹೆಂಗರಳಿನವರು

ಬಿಕರಿ ಆಗುತ್ತಿವೆ
ಬಿಕರಿ ಆಗುತ್ತಿವೆ
ಓದು ಬರಹ ಕಲಿತವರು ಕಲಿಸುವವರು

ಬಿಕರಿ ಆಗುತ್ತಿವೆ
ಬಿಕರಿ ಆಗುತ್ತಿವೆ
ಮತಗಳು ಮತಪಡೆದವರು

ಬಿಕರಿ ಆಗುತ್ತಿವೆ
ಬಿಕರಿ ಆಗುತ್ತಿವೆ
ಭಿಕರತೆ ಬದುಕು ಬದುಕಲೆಣಿಸುವವರು

ಬಿಕರಿ ಆಗುತ್ತಿವೆ
ಬಿಕರಿ ಆಗುತ್ತಿವೆ
ಬರವಣಿಗೆಗಳು ಬೊಗಳೆಗಳು ಬರಹಗಾರರು

ಬಿಕರಿ ಆಗುತ್ತಿವೆ
ಬಿಕರಿ ಆಗುತ್ತಿವೆ
ಪ್ರೀತಿ ಪ್ರೇಮ ಪ್ರೇಮಿಗಳು

ಬಿಕರಿ ಆಗುತ್ತಿವೆ
ಬಿಕರಿ ಆಗುತ್ತಿವೆ
ಅಧಿಕಾರ ಅಂತಸ್ತು ಆಶಿರ್ವಾದಿಸುವವರು


ಬಿಕರಿ ಆಗದವರು
ಬಿಕರಿ ಆಗದವರು
ಭಿಕ್ಷುಕರಾಗುತ್ತಿದ್ದಾರೆ ಬರಿದಾಗುತ್ತಿದ್ದಾರೆ ಬಡಕಲಾಗುತ್ತಿದ್ದಾರೆ

ಬಿಕರಿ ಆಗದವರು
ಬಿಕರಿ ಆಗದವರು
ಬಂಧಿಗಳಾಗುತ್ತಿದ್ದಾರೆ ಬೇವರ್ಸಿಗಳಾಗುತ್ತಿದ್ದಾರೆ ಬದುಕಲಾರದವರಾಗುತ್ತಿದ್ದಾರೆ

ಬಿಕರಿ ಆಗದವರು
ಬಿಕರಿ ಆಗದವರು
ಕಡುಕೂಪ ಕಾಣುತ್ತಿದ್ದಾರೆ ಕಾಡುಪಾಲಾಗುತ್ತಿದ್ದಾರೆ ಕುಗ್ಗುತ್ತಿದ್ದಾರೆ

ಬಿಕರಿ ಆಗದವರು
ಬಿಕರಿ ಆಗದವರು
ಕಂಗಾಲಾಗುತ್ತಿದ್ದಾರೆ ಕರಿಮಸಿಯ ಮುಖಕ್ಕೆ ಹಚ್ಚಿಸಿ ಕೊಳ್ಳುತ್ತಿದ್ದಾರೆ

ಬಿಕರಿ ಆಗದವರು
ಬಿಕರಿ ಆಗದವರು
ಅವಮಾನಿತರಾಗುತ್ತಿದ್ದಾರೆ ಅಪರೂಪವಾಗುತ್ತಿದ್ದಾರೆ ಅಪರಿಚಿತರಾಗುತ್ತಿದ್ದಾರೆ

ಬಿಕರಿ ಆಗದವರು
ಬಿಕರಿ ಆಗದವರು
ಸ್ಥಾನ ಪಲ್ಲಟಗೊಳ್ಳುತ್ತಿದ್ದಾರೆ
ಸಾಮಾನ್ಯರಾಗುತ್ತಿದ್ದಾರೆ
ಸಜೀವರಾಗಿರದವರಾಗಿದ್ದಾರೆ

ಬಿಕರಿ ಆಗದವರು
ಬಿಕರಿ ಆಗದವರು
ಬಾಯಿಯಿಲ್ಲದವರಾಗುತ್ತಿದ್ದಾರೆ
ಬೋನಕ್ಕೂ ಗತಿಯಿಲ್ಲದವರಾಗುತ್ತಿದ್ದಾರೆ
ಬಯಕೆಗಳ ಬಯಸದವರಾಗಿದ್ದಾರೆ

ಬಿಕರಿ ಆಗದವರು
ಬಿಕರಿ ಆಗದವರು
ಬೇಡದವರಾಗುತ್ತಿದ್ದಾರೆ ಬರಿದಾಗುತ್ತಿದ್ದಾರೆ
ಬರದಿಂದ ಬಾಳಲೆಣಗುತ್ತಿದ್ದಾರೆ

ಬಿಕರಿ ಆಗದವರು
ಬಿಕರಿ ಆಗದವರು
ಆಸರೆ ಕಾಣದ ಆಸೆಗಳ ಮರೆತ
ಹಸುವಿನಂತಾಗುತ್ತಿದ್ದಾರೆ.


– ಮನಂ, ಬೆಂಗಳೂರು
*****