ಅನುದಿನ ಕವನ-೮೧೯, ಕವಿಯಿತ್ರಿ: ಡಾ. ನಾಗರತ್ನ ಅಶೋಕ ಭಾವಿಕಟ್ಟಿ,  ಹುನಗುಂದ. ಕವನದ ಶೀರ್ಷಿಕೆ: ಹುಟ್ಟುತ್ತಿಲ್ಲ ಕಾವ್ಯ

ಹುಟ್ಟುತ್ತಿಲ್ಲ ಕಾವ್ಯ

ಊರ ಕೇರಿಗಳ ಸಂದಿಗಳಲಿ
ನೊಂದು ಅಸಹನೆಯ ಬೇಗುದಿಯಲ್ಲಿ
ಕುದಿಯುತಿರುವ ರಕ್ತದ
ನರ ಮಾಂಸಗಳ ಕಂಡು
ಹುಟ್ಟುತಿಲ್ಲ ಕಾವ್ಯ

ಒಲಿದ ಹೃದಯಗಳ ಮಧ್ಯೆ
ಜಾತಿ ವಿಷ ಬೀಜವ ಬಿತ್ತಿ
ಮುಗ್ಧ ಜೀವಗಳ ಬಲಿ ಪಡೆವ
ಮಾನ ಮರ್ಯಾದೆವಂತರ ಕಂಡು
ಹುಟ್ಟುತಿಲ್ಲ ಕಾವ್ಯ

ಅಕ್ಕ ತಂಗಿ ಹಡೆದವ್ವಗಳ ಮರೆತು
ಕರಾಳ ಕತ್ತಲೆಯ ರಾತ್ರಿಗಳಲಿ
ಮುಖ ನೋಡದೆ ಮೇಲೆರಗಿ
ತೃಷೆಯ ತೀರಿಸಿಕೊಳ್ಳುತಿರುವ
ಕಾಮಾಂಧರ ಕಂಡು
ಹುಟ್ಟುತಿಲ್ಲ ಕಾವ್ಯ

ಲಾಲಿತ್ಯದಲಿ ಮೈ ಮರೆತು
ಗಿರಿ ಶಿಖರ ಕಾನನಗಳ ದಾಟಿ
ಸ್ವಚ್ಚಂದದಿ ಹರಿವ ಜಲ ಜೀವ ನದಿಗಳಿಗೆ
ಅಡ್ಡಗಟ್ಟಿ ಸೆಡ್ಡು ಹೊಡೆದು
ಕಲುಷಿತಗೊಳಿಸಿ ಕಮರಿಸುತಿರುವ
ಕಾರ್ಖಾನೆಗಳ ಕಂಡು
ಹುಟ್ಟುತಿಲ್ಲ ಕಾವ್ಯ

ಕೈ ಮುಗಿದು ಕುರ್ಚಿ ಹಿಡಿದು
ಸಹಾಯ ಬೇಡಿ ಬಂದವರ ಬೂಟಲಿ ಒದ್ದು
ಚಿನ್ನದ ತಟ್ಟೆಯಲಿ ಅನ್ನ ತಿನ್ನುವ
ಜನನಾಯಕರ ಕಂಡು
ಹುಟ್ಟುತಿಲ್ಲ ಕಾವ್ಯ

ಮಾನವೀಯತೆಯ ಮುಖವಾಡ ಧರಿಸಿ
ಮನುಷ್ಯತ್ವವ ಮಾರಿಕೊಳುತ
ಗಳಿಸಿ ಉಳಿಸಿ ತಿನಲಾರದೆ ಹೋದ
ಅಧಮರ ಕಂಡು
ಹುಟ್ಟುತಿಲ್ಲ ಕಾವ್ಯ

-ಡಾ. ನಾಗರತ್ನ ಅಶೋಕ ಭಾವಿಕಟ್ಟಿ,  ಹುನಗುಂದ            *****