ಚಳ್ಳಕೆರೆ ತಳಕು ಬಳಿ ಅಪಘಾತ: ನಾಡೋಜ ಬೆಳಗಲ್ಲು ವೀರಣ್ಣ ಅಸ್ತಂಗತ, ನಾಳೆ ಸರಕಾರಿ ಗೌರವಗಳೊಂದಿಗೆ ಅಂತಿಮ ಸಂಸ್ಕಾರ?

ಬಳ್ಳಾರಿ, ಏ.2: ಚಳ್ಳಕೆರೆಯ ತಳಕು ಬಳಿ ಭಾನುವಾರ ಬೆಳಿಗ್ಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ  ಅಂತಾರಾಷ್ಟ್ರೀಯ ತೊಗಲುಗೊಂಬೆ ಕಲಾವಿದ ನಾಡೋಜ ಬೆಳಗಲ್ಲು ವೀರಣ್ಣ(92) ಅವರು ವಿಧಿವಶರಾಗಿದ್ದಾರೆ.
ಬೆಳಿಗ್ಗೆ  ಏಳು ಗಂಟೆ ಸುಮಾರಿಗೆ ಬಳ್ಳಾರಿಯಿಂದ ಚಿಕ್ಕಮಂಗಳೂರಿಗೆ ತಮ್ಮ ಕಿರಿಯ ಪುತ್ರ ಶಿಕ್ಷಕ ಹನುಮಂತ ಬೆಳಗಲ್ಲು ಅವರ ಜತೆ ಹೊರಟ ವೀರಣ್ಣ ಅವರು ಕಾರು ತಾಂತ್ರಿಕ ಕಾರಣಗಳಿಂದ ಪಲ್ಟಿಯಾಗಿದೆ. ಗಂಭೀರವಾಗಿ ಗಾಯಗೊಂಡ ವೀರಣ್ಣ ಅವರನ್ನು ಚಳ್ಳಕೆರೆ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಕಾರು ಚಾಲನೆ ಮಾಡುತ್ತಿದ್ದ ಹನುಮಂತ ತೀವ್ರ ಗಾಯಗೊಂಡು ಚಿಕಿತ್ಸೆ ಪಡೆದು ಬಳ್ಳಾರಿಗೆ ಆಗಮಿಸಿದ್ದಾರೆ.
ಮೃತರು ಆರು‌ಜನ ಪುತ್ರ-ಪುತ್ರಿಯರು, ಮೊಮ್ಮಕ್ಕಳು, ಮರಿ ಮೊಮ್ಮಕ್ಕಳು, ಕಲಾಭಿಮಾನಿಗಳು ಸೇರಿದಂತೆ ಅಪಾರ ಬಂಧು‌ ಮಿತ್ರರನ್ನು ವೀರಣ್ಣ ಅವರು ಅಗಲಿದ್ದಾರೆ.
ಸರಕಾರಿ ಗೌರವಗಳೊಂದಿಗೆ ಬೆಳಗಲ್ಲು ಗ್ರಾಮದ ಸಮೀಪ ಸೋಮವಾರ ಸಂಜೆ ಅಂತಿಮ‌ ಸಂಸ್ಕಾರ ನೆರವೇರಿಸಲು  ಚುನಾವಣೆ ಸಂಹಿತೆ ಜಾರಿ ಹಿನ್ನಲೆಯಲ್ಲಿ ರಾಜ್ಯ ಮುಖ್ಯಕಾರ್ಯದರ್ಶಿಗಳಿಗೆ ಅನುಮತಿಗೆ ಕೋರಲಾಗಿದೆ  ಎಂದು ಅಧಿಕೃತ ಮೂಲಗಳು ತಿಳಿಸಿವೆ.
ತಳಕು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಅಂತಿಮ ದರ್ಶನ: ನಗರದ ರೇಡಿಯೋ ಪಾರ್ಕ್ ಬಳಿಯ ನಿವಾಸದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು, ಪ್ರಸಿದ್ಧ ಗಾಯಕ ಪದ್ಮಶ್ರೀ ಪಂ. ವೆಂಕಟೇಶ ಕುಮಾರ, ಎಡಿಸಿ ಮಂಜುನಾಥ್, ಕರ್ನಾಟಕ ಯಕ್ಷಗಾನ ಅಕಾಡೆಮಿ ರಿಜಿಸ್ಟ್ರಾರ್ ಎಸ್ ಎಚ್ ಶಿವರುದ್ರಪ್ಪ, ಕರ್ನಾಟಕ ಜಾನಪದ ಪರಿಷತ್ತು, ಜಿಲ್ಲಾ ಘಟಕದ ಅಧ್ಯಕ್ಷ,  ಹಿರಿಯ ಪತ್ರಕರ್ತ ಸಿ.ಮಂಜುನಾಥ್, ಹಿರಿಯ ಸಾಹಿತಿಗಳಾದ ಡಾ. ರಾಜಪ್ಪ ದಳವಾಯಿ, ಡಾ. ವೆಂಕಟಯ್ಯ ಅಪ್ಪಗೆರೆ, ಟಿ ಕೆ ಗಂಗಾಧರ ಪತ್ತಾರ,  ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಭಾರಿ ಸಹಾಯಕ ‌ನಿರ್ದೇಶಕ ಸುರೇಶ ಬಾಬು, ನಿವೃತ್ತ ಉಪ‌ ನಿರ್ದೇಶಕ ಟಿ.ಕೊಟ್ರಪ್ಪ, ಕಸಾಪ ಜಿಲ್ಲಾಧ್ಯಕ್ಷ ನಿಷ್ಟಿ ರುದ್ರಪ್ಪ, ರಾಘವ ಕಲಾ ಮಂದಿರದ ಅಧ್ಯಕ್ಷ ಕೋಟೇಶ್ವರ ರಾವ್, ಗೌರವ ಅಧ್ಯಕ್ಷ ಕೆ. ಚನ್ನಪ್ಪ, ರಮೇಶ ಗೌಡ ಪಾಟೀಲ್, ಮುಖಂಡರಾದ ಗುತ್ತಿಗೆನೂರು ವಿರೂಪಾಕ್ಷಗೌಡ,  ಕರ್ನಾಟಕ‌ ಬಯಲಾಟ ಅಕಾಡೆಮಿ ಸದಸ್ಯ‌ ಮುದ್ದಟನೂರು ತಿಪ್ಪೇಸ್ವಾಮಿ, ಪಾಲಿಕೆ ಸದಸ್ಯ ಎಂ. ಗೋವಿಂದರಾಜುಲು, ಹರಪನಹಳ್ಳಿಯ ಸಮಸ್ತರು ಪರಶುರಾಮ್,  ದಾವಣಗೆರೆ ಸ್ಫೂರ್ತಿ ಕಲಾ ಸಂಘದ ಅಧ್ಯಕ್ಷ ಎನ್ ಎಸ್ ರಾಜು, ಲೇಖಕ, ಪತ್ರಕರ್ತ ಎನ್ ಡಿ ತಿಪ್ಪೇಸ್ವಾಮಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಬಿ. ಸುಜಾತಮ್ಮ, ವೀಣಾ ಆದೋನಿ, ವರಲಕ್ಷ್ಮಿ,
ರಂಗ ಕಲಾವಿದರಾದ ಜಯಲಕ್ಷ್ಮಿ ಪಾಟೀಲ್,
ಪುರುಷೋತ್ತಮ ಹಂದ್ಯಾಳ್, ಲತಾಶ್ರೀ, ಎಎಂಪಿ ವೀರೇಶಸ್ವಾಮಿ, ಮೋಕ‌ ರಮೇಶ್, ಗಂಗಣ್ಣ ಮಕಸಂ, ರಂಗತೋರಣದ ಪ್ರಭು ಕಪ್ಪಗಲ್ಲು, ಅಡವಿಸ್ವಾಮಿ, ಜೋಳದರಾಶಿ ರಾಮೇಶ್ವರ ಟ್ರಸ್ಟ್ ನ ಅಧ್ಯಕ್ಷ ಪಂಪನಗೌಡ, ಡಾ. ಸುಭಾಷ್ ಭರಣಿ ಸಾಂಸ್ಕೃತಿಕ ವೇದಿಕೆಯ ನಿರ್ದೇಶಕಿ ಸರಸ್ವತಿ ಎನ್ ಅಪ್ಪಗೆರೆ,  ಸಂಘಟಕ ಟಿ ಎಚ್ ಎಂ ಬಸವರಾಜ್ ಮತ್ತಿತರ ಗಣ್ಯರು ಮೃತರ ಅಂತಿಮ‌ ದರ್ಶನ ಪಡೆದರು.


ಸಾರ್ವಜನಿಕರ ಅಂತಿಮ ದರ್ಶನ: ನಾಡಿನ ಸಾಂಸ್ಕೃತಿಕ ರಾಯಭಾರಿ, ಕರ್ನಾಟಕ ಯಕ್ಷಗಾನ ಮತ್ತು ಬಯಲಾಟ ಅಕಾಡೆಮಿಯ ಮಾಜಿ ಅಧ್ಯಕ್ಷರು, ಅಂತಾರಾಷ್ಟ್ರೀಯ ರಂಗಭೂಮಿ ಹಾಗೂ ತೊಗಲುಗೊಂಬೆ ಕಲಾವಿದರು ನಾಡೋಜ ಬೆಳಗಲ್ಲು ವೀರಣ್ಣ ಅವರ ಸಾರ್ವಜನಿಕ ಅಂತಿಮ ದರ್ಶನಕ್ಕೆ ಜಿಲ್ಲಾಡಳಿತ ವ್ಯವಸ್ಥೆ ಮಾಡಿದೆ. ಸಾರ್ವಜನಿಕರು, ಕಲಾಭಿಮಾನಿಗಳು ಹಾಗೂ ಕಲಾ ವೃಂದದವರಿಗೆ ಅವರ ಅಂತಿಮ ದರ್ಶನ ಪಡೆಯಲು ಏ.3 ರಂದು ಸೋಮವಾರ ಮುಂಜಾನೆ 10 ಗಂಟೆಯಿಂದ 3.00ರ ಗಂಟೆಯವರೆಗೆ ಬಳ್ಳಾರಿ ನಗರದ ರಾಘವ ಕಲಾ ಮಂದಿರದಲ್ಲಿ ಅವಕಾಶ ಕಲ್ಪಿಸಲಾಗಿದೆ.
——–