ಏ.2ರಂದು ಆದಿತ್ಯವಾರ ಚಳ್ಳಕೆರೆ ಸಮೀಪ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ರಂಗೈಕ್ಯರಾದ, ತೊಗಲುಗೊಂಬೆಯಾಟ ಕಲೆಗೆ ಹೊಸ ಆಯಾಮ ತಂದುಕೊಟ್ಟ ಮಹಾನ್ ಚೇತನ ಅಂತಾರಾಷ್ಟ್ರೀಯ ಖ್ಯಾತಿಯ, ಬಳ್ಳಾರಿ ರಂಗಭೂಮಿಯ ಕೀರ್ತಿ ಕಿರೀಟದ ಅಮೂಲ್ಯ ರತ್ನ, ಜಾನಪದಶ್ರೀ ನಾಡೋಜ ಬೆಳಗಲ್ಲು ವೀರಣ್ಣ ಅವರಿಗೆ, ಬಹುಕಾಲದ ಒಡನಾಡಿ ಹಿರಿಯ ಕವಿ ಟಿ.ಕೆ. ಗಂಗಾಧರ ಪತ್ತಾರ ಅವರು ತಮ್ಮ ಎರಡು ಕವನಗಳ ಮೂಲಕ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದ್ದಾರೆ. (ಸಂಪಾದಕರು)
ಕವನ-1
ಬಳ್ಳಾರಿ ಬಿರುಬಿಸಿಲ ಬೆಂಕಿಯಲಿ ಬಿರಿದ ಹೂ ಬಡತನದ ಕಡು ಬೇಗೆಯಲಿ ಬಾಡಲಿಲ್ಲ ಭವ ಶರಧಿ ಮಂಥನದಿ ಬರಿ ನಂಜನುಂಡರೂ ಬಿಡದೆ ಕಾಡಿದ ಬಿದಿಗೆ ಎದುರಾಡಲಿಲ್ಲ-೧
ಹೆತ್ತವಳು ಇರದಿರಲು ಹೊತ್ತವಳು ತೊರೆಯುವಳೆ ಭೂಮಾತೆ ಮಮತೆಯಲಿ ಬೆಳೆದ ಪರಪುಟ್ಟ ಗುರುಹಿರಿಯರಾರೈಕೆ ಊರವರ ಹಾರೈಕೆ ಎಳವೆಯಲೆ ಏರಿದನು ಬಯಲಾಟದಟ್ಟ-೨
ಅಕ್ಕರದಿ ಅಕ್ಕರವ ಕಲಿಸುವವರಿಲ್ಲದಿರೆ ಸಂಗೀತಶ್ರೀ ನೆಲೆಸಿದಳು ಜಿಹ್ವೆ ಮೇಲೆ ಲೋಕನಾಟಕ ಸೂತ್ರಧಾರಿ ಹಾಡಿಸುತಿರಲು ಭವದ ರಂಗದ ಮೇಲೆ ನಟರಾಜ ಲೀಲೆ-೩
“ಕಾವ್ಯದೊಳು ನಾಟಕವೆ ರಮ್ಯ”ವೆಂಬುದು ಸತ್ಯ ನಾಟಕವೆ ಜೀವನದ ಅವಿಭಾಜ್ಯ ಅಂಗ ಕಲಿಸಿ-ಆಡಿಸಿ-ಆಡಿ, ನಟಿಸಿ-ನರ್ತಿಸಿ-ಹಾಡಿ ದಿಟದಿ ಜೀವನವಾಯ್ತು ನಾಟಕದ ರಂಗ-೪
“ಕಲೆಗಾಗಿ ಕಲೆಯೊ”, “ಜೀವನಕಾಗಿ ಕಲೆಯೊ?” ಈ ವಾದ ಜಿಜ್ಞಾಸೆಯೊಳಗಿಲ್ಲ ಹುರುಳು ದಿವ್ಯ ಕಲೆಗಾಗಿಯೇ ಮುಡಿಪಿಟ್ಟು ಸರ್ವಸ್ವ ರಂಗಕರ್ಮದಿ ಕಂಡೆ ಜೀವನದ ತಿರುಳು-೫
ಸಿಹಿ-ಕಹಿಯು, ಸುಖ-ದುಃಖ ಬಯಲು ಗಳಿಕೆಯ ಲೆಕ್ಖ ಅರೆ ಹೊಟ್ಟೆ ಅರೆ ಬಟ್ಟೆ ನಾಟಕದ ಬದುಕು ಜನಕೆ ಹರುಷವ ನೀಡಿ ನೋವ ನುಂಗುವ ನಟಗೆ ತೊಗಲುಗೊಂಬೆಯ ಕಲೆಯು ಕರುಣಿಸಿತು ಬೆಳಕು-೬
ಪಾರಂಪರಿಕ ಹಳೆ ಪುರಾಣ ಕತೆಗಳ ಬದಲು ಹೊಚ್ಚ ಹೊಸ ಆಯಾಮ ಹೊಸಹೊಸತು ತಂತ್ರ ಒಡವೆ ಮುಕುಟ ದುಕೂಲ ವೇಷ ವೈಭವ ರಹಿತ ಸರಳತೆಯ ಸಹಜತೆಯ ನವರಾಗ ಮಂತ್ರ-೭
ಝಾನ್ಸಿ-ಆಜಾದ್-ಪಾಂಡೆ-ಭಗತಸಿಂಗ್ ಬಲಿದಾನ ಸ್ವಾತಂತ್ರ್ಯ ಸಂಗ್ರಾಮ ಆಂಗ್ಲರೆದೆ ನಡುಕ ಬಸವ-ಬಾಪೂ-ತೊಗಲು ಗೊಂಬೆ ರೂಪದಿ ಬರಲು ಜನಕೆ ಹೊಸ ಅನುಭವದ ಸಂತೋಷ ಪುಳಕ-೮
ಸಾವಯವ ಗೊಬ್ಬರದ ಬೇಸಾಯ ಪದ್ಧತಿಯ ಸಾರುವುವು ಆಹಾರ ಭದ್ರತೆಯ ಹಿರಿಮೆ ಬಿದಿಗಿ ಚಂದ್ರಮನಂತೆ ಶಿಶುವು ಬೆಳೆಯುವ ಬಗೆಯ ತಿಳಿಸುವುವು ಹಡೆದವ್ವನೆದೆಹಾಲ ಮಹಿಮೆ-೯
ಜನಹಿತಕೆ ಗೊಂಬೆಗಳದೆಂಥ ಕಳಕಳಿ ನೋಡಿ ಕತೆಯೊಳಗೆ ಉಪದೇಶ ತಿಳಿಸುವುವು ನೀತಿ ಜನರ ಕಾಡುವ ರೋಗ ಕುರಿತ ಮಾಹಿತಿ ನೀಡಿ ಪ್ರಗತಿ ಗೀತೆಯ ಹಾಡಿ ನೆಲೆಸುವುವು ಶಾಂತಿ-೧೦
ರಂಗಗೀತೆಯ ಗತ್ತು ಲಾವಣಿಯ ಗಮ್ಮತ್ತು ಜಾನಪದ ಮಟ್ಟುಗಳು ಹಿಡಿಸುವುವು ಹುಚ್ಚು ಕಲ್ಪನಾ ಮೂಸೆಯಲಿ ಮೂಡುವಾ ಚಿತ್ರಗಳು ಅಭಿವ್ಯಕ್ತಿಸುವ ಕಥನ ಬಲು ಅಚ್ಚುಮೆಚ್ಚು-೧೧
ಯಕ್ಷ-ಯಕ್ಷಿಣಿಯರೂ ಗಂಧರ್ವ-ಕಿನ್ನರರು ಸೂಸುವರು ಜಾನಪದ ಸಂಸ್ಕೃತಿಯ ಗಂಧ ವೀರಣ್ಣನವರ ಸಿರಿಕಂಠ ಕೈ ಚಳಕಕ್ಕೆ ಮೈಮರೆತು ನಲಿಯುವರು ಜನ ಹರ್ಷದಿಂದ—೧೨
ಬಳ್ಳಾರಿ ಬಿಸಿಲಲ್ಲು ಹೂವಾಯ್ತು ಬೆಳಗಲ್ಲು ರಂಗ-ಜನಪದ ಕಲಾ ಸೌಂದರ್ಯ ಮೂರ್ತಿ ನಗರ ಜಿಲ್ಲಾ ರಾಜ್ಯ ರಾಷ್ಟ್ರ ಗಡಿಗಳ ದಾಟಿ ವಿಶ್ವ ವ್ಯಾಪ್ತಿಯು ಅದರ ವರಭವ್ಯ ಕೀರ್ತಿ-೧೩
“ಜಾನಪದ ಶ್ರೀ” ಸೇರಿ ಹಲವು ಪದವಿ ಪ್ರಶಸ್ತಿ ಹಂಪಿ ಕನ್ನಡ ವಿ.ವಿ.ನಾಡೋಜ ಪ್ರಾಪ್ತಿ ಯಕ್ಷಗಾನ್ ಬಯಲಾಟ ಅಕಡೆಮಿಯ ಅಧ್ಯಕ್ಷ ಸ್ಥಾನ ಗೌರವದಿಂದ ಬದುಕಿನಲಿ ತೃಪ್ತಿ-೧೪
*****
ಕವನ-2
ವೇದ-ಶಾಸ್ತ್ರ-ಪುರಾಣ-ಜನಪದ ಆಧುನಿಕ ಸಂಗತಿಗಳ/ ದೇವ-ದಾನವ, ಯಕ್ಷ-ಮಾನವ ಪಕ್ಷಿ-ಪಶು ಜಲಚರಗಳ/೧/
ನಯನ ರಮ್ಯತೆ ಕರ್ಣ ಮಧುರತೆ ಕಥನ-ಗಾಯನ-ನರ್ತನ/ ನಾಟಕಾಂಕದ ಪರದೆ ಜಾರಲು ತೊಗಲು ಗೊಂಬೆಯ ತೋಂತನ/೨/
ರಾಮ ರಾವಣ ಬುದ್ಧ ಬಸವರ ಝಾನ್ಸಿ ಚೆನ್ನಮ್ಮಾಜಿಯ/ ಸತ್ಯ ಶಾಂತಿ ಅಹಿಂಸೆ ತಾತ್ವಿಕ ಬಿಡುತೆ ಚಳುವಳಿ ಗಾಥೆಯ/೩/
ಕನಕ ಚಿಂತನ ಬಾಪು ಜೀವನ ರೋಗ ಮಾಹಿತಿ ಪರಿಚಯ/ ನೋವು ನಲಿವಿನ ಏಳು ಬೀಳಿನ ಬಾಳ ಗೋಳಿನ ಸಂಚಯ/೪/
ಭವದ ಜಡತೆಯ ಕೊರಡ ಕೊನರಿಸಿ ಅಮೃತ ಚೇತನ ನೀಡುತ/ ವಿವಿಧ ವಿಷಯದ ರಮ್ಯ ರೋಚಕ ಭಿನ್ನ ಕಥೆಗಳ ಹೇಳುತ/೫/
ಮೃದು ಸ್ವಭಾವದ ನೇರ ನಡೆನುಡಿ ಭವ್ಯ-ದಿವ್ಯ ಸುಸಂಸ್ಕೃತ/ ರಂಗಶ್ರೀ ಬೆಳಗಲ್ಲು ವೀರ- ಣ್ಣವರ ಬದುಕೇ ಅದ್ಭುತ/೬/
ಜಾನಪದ ಲಾವಣಿಯ ಮಟ್ಟಿನ ರಂಗ ಗೀತೆಯ ಗತ್ತಿನ/ ಉಚ್ಚ ಕಂಠದ ಗಾನ ಧಾರೆಯ ಲಲಿತ ಸವಿನುಡಿ ಚೇತನ/೭/
ತೊಗಲು ಗೊಂಬೆಯ ಕುಣಿತ ಮಣಿತಕೆ ಜನತೆ ಮರೆವುದು ಮೈಮನ/ ವರ ಕಲಾವಿದ ನಿಮಗೆ ನಮ್ಮಯ ನಮನ ಸುಮನ ಸಮರ್ಪಣ/೮/
-ಟಿ.ಕೆ.ಗಂಗಾಧರ ಪತ್ತಾರ್, ಹಿರಿಯ ಕವಿಗಳು, ಬಳ್ಳಾರಿ *****