“ನಾಡೋಜ”ರನ್ನು”ಕಾಡೋಜ”ರನ್ನಾಗಿಸಲಾಯಿತೇ?!
ಹೌದು! ಊರು, ತಾಲೂಕು, ಜಿಲ್ಲೆ, ರಾಜ್ಯ, ರಾಷ್ಟ್ರಗಳ ಗಡಿ ದಾಟಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಬಳ್ಳಾರಿಯ ಹೆಸರನ್ನು ಪ್ರಾಜ್ವಲ್ಯಮಾನವಾಗಿ ಬೆಳಗಿಸಿದ ಜಾನಪದಶ್ರೀ, ತೊಗಲುಗೊಂಬೆಯಾಟದ ಮಾಂತ್ರಿಕ ಬೆಳಗಲ್ಲು ವೀರಣ್ಣನವರ ಸಮಾಧಿಗೆ ನಗರದಲ್ಲಿ ಎಲ್ಲಿಯೂ ಜಾಗ ಸಿಗಲಿಲ್ಲವೇ??!!
ಕರ್ನಾಟಕ ಕಲಾಪ್ರಪಂಚದ “ಅಸ್ಮಿತೆ”ಯಾಗಿರುವ ಜಾನಪದ ತೊಗಲುಗೊಂಬೆಯಾಟದ ಕಲಾ ಕುಸುಮವನ್ನು ವಿಶ್ವದಾದ್ಯಂತ ಪರಿಮಳಿಸಿದ ಕಲಾಕಲ್ಪತರುವಿಗೆ ಸೂಕ್ತ ನ್ಯಾಯ ಲಭಿಸಲಿಲ್ಲವೇ???!!!
ಕನ್ನಡ ರಂಗಭೂಮಿ, 5000ವರ್ಷಗಳಷ್ಟು ಪ್ರಾಚೀನವಾದ, ಇಂದಿನ ಅಭಿವರ್ಧಿತ ಸಿನಿಮಾ ಕಲೆಗೆ ಮೂಲ ಪ್ರೇರಣೆಯಾಗಿರುವ ಜಾನಪದ ತೊಗಲುಗೊಂಬೆಯಾಟದ ಮೂಲಕ ಕರ್ನಾಟಕದ ತನ್ಮೂಲಕ ಭಾರತದ ಕಲಾಪ್ರಪಂಚವನ್ನು ಶ್ರೀಮಂತಗೊಳಿಸಿದ ಕಲಾಧೀಮಂತ ಬೆಳಗಲ್ಲು ವೀರಣ್ಣನವರ ಸಮಾಧಿಗೆ ಸೂಕ್ತ ಸ್ಥಳವನ್ನು ಬಳ್ಳಾರಿ ನಗರವ್ಯಾಪ್ತಿಯಲ್ಲಿಯೇ ಒದಗಿಸುವ ಔದಾರ್ಯತೆ-ಜಿಲ್ಲಾಡಳಿತಕ್ಕೆ! ಮಹಾನಗರ ಪಾಲಿಕೆಗೆ!! ನಗರಾಭಿವೃದ್ಧಿಪ್ರಾಧಿಕಾರಕ್ಕೆ!!!-ಇಲ್ಲವಾದುದು ವಿಪರ್ಯಾಸವೇ ಸರಿ.
ಸಾರ್ವಜನಿಕರಿಗೆ ಮೇರು ವ್ಯಕ್ತಿತ್ವದ ಕಲಾಕೌಸ್ತುಭ ಬೆಳಗಲ್ಲು ವೀರಣ್ಣನವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ರಾಘವ ಕಲಾ ಮಂದಿರದಲ್ಲಿ ವ್ಯವಸ್ಥೆ ಕಲ್ಪಿಸಲಾಗಿತ್ತು!, ಸಮಾಧಿಯ ಸ್ಥಳಕ್ಕೆ ಆಗಮಿಸುವವರಿಗೆ ಮೂರು ಬಸ್ಸುಗಳನ್ನು ಒದಗಿಸಲಾಗಿತ್ತು!!, ಸರ್ಕಾದ ಸಕಲ ಗೌರವದೊಂದಿಗೆ ಕೌಟುಂಬಿಕ ಪರಂಪರೆಗೆ ಅನುಸಾರವಾಗಿ ನಾಡೋಜರ ಅಂತ್ಯಕ್ರಿಯೆಯನ್ನು ವಿಧ್ಯುಕ್ತವಾಗಿ ನೆರವೇರಿಸಲು ಸೂಕ್ತ ಏರ್ಪಾಟು ಮಾಡಲಾಗಿದೆಯೆಂದು ಸಮರ್ಥಿಸಿಕೊಳ್ಳಬಹುದು!
ಆದರೆ ಎಲ್ಲಿ ಸ್ವಾಮಿ!? ಬಳ್ಳಾರಿಯಿಂದ ಸುಮಾರು 15ಕಿ.ಮೀ.ದೂರದಲ್ಲಿರುವ ಶಂಕರಬಂಡಿಯ ಆಚೆ, ಧನಲಕ್ಷ್ಮಿ ಕ್ಯಾಂಪ್ ದಾಟಿ ಅಕ್ಷರಶಃ ಅರಣ್ಯೋಪಾದಿಯಲ್ಲಿರುವ, ಸಂಪರ್ಕ ರಸ್ತೆ ಹೋಗಲಿ ಸಮರ್ಪಕ ಕಾಲುದಾರಿಯೂ ಇಲ್ಲದ, ಬಳ್ಳಾರಿ-ಅಸುಂಡಿ ಡಾಂಬರು ರಸ್ತೆಯಿಂದ ಒಂದು-ಒಂದೂವರೆ ಕಿಲೋ ಮೀಟರಿನಷ್ಟು ದೂರದ, ಅದೂ ಬೆಳಗಲ್ಲು ವೀರಣ್ಣನವರ ಪಿತ್ರಾರ್ಜಿತ ಜಮೀನಿನಲ್ಲಿಯೇ ಅಲ್ಲವೇ?!
ಮೂಲೆ-ಮೂಲೆಯ ಹಳ್ಳಿ-ಹಳ್ಳಿಗಳಲ್ಲಿ ಬೆಳಗಲ್ಲು ವೀರಣ್ಣನವರಿಂದ ಬದುಕು ಕಟ್ಟಿಕೊಂಡ ಅಸಂಖ್ಯಾತ ಬಡಕಲಾವಿದರಿದ್ದಾರೆ. ಅಂತಿಮದರ್ಶನ ಹಾಗೂ ಅಂತ್ಯಕ್ರಿಯೆಗೆ ದೂರದೂರದಿಂದ ಧಾವಿಸಿಬಂದಿದ್ದ ಕೆಲವರು ತಮ್ಮ ತಮ್ಮಲ್ಲೇ ಮಾತಾಡಿಕೊಳ್ಳುತ್ತಿದ್ದುದು ನನ್ನ ಕಿವಿಗೆ ಬಿತ್ತು. “ಈಗೇನೋ ಬಸ್ ವ್ಯವಸ್ಥೆ ಮಾಡಿದ್ದಾರೆ!, ಆದರೆ ಕಲಾರತ್ನ ಕಲಾಭೈರವನ ಸಮಾಧಿ ದರ್ಶನಾಕಾಂಕ್ಷಿಯಾಗಿ ಬರಬೇಕೆನ್ನುವ ನಮ್ಮಂಥ ಬಡಕಲಾವಿದರ ಪಾಡೇನು?! ಉಳ್ಳವರು ಕಾರಲ್ಲಿ ಬರುತ್ತಾರೆ!, ಸುಸ್ಥಿತಿಯಲ್ಲಿದ್ದವರು ಆಟೋ ಮಾಡಿಕೊಂಡು ಬರ್ತಾರೆ!!, ನಮ್ಮಂಥ ಬಡಪಾಯಿಗಳು ಬರೋದು ಹ್ಯಾಗೆ ಸ್ವಾಮಿ?! ಆಡಾಡ್ತ ನಮ್ಮ ಅಣ್ಣಾವ್ರನ್ನ “ಅಡವೀ ಪಾಲು” ಮಾಡಿಬಿಟ್ರಲ್ರೀ-ಎಂದು “?”ಪ್ರಶ್ನೆ”ಮಾಡುತ್ತಿದ್ದರು! ಇದಕ್ಕೆ “ಉತ್ತರ” ಕೊಡುವವರು ಯಾರು?! ಗ್ರಾಮೀಣ ಪ್ರದೇಶದ ಒಬ್ಬ ಕಲಾವಿದೆ-ಉಪಯೋಗಿಸಿದ-“ಅಡವೀಪಾಲು”-ಎನ್ನುವ ಶಬ್ದ ನನ್ನ ಕಿವಿಗಳಲ್ಲಿ ಅನುರಣಿಸುತ್ತಿದೆ!
ಹಂಪಿ ಕನ್ನಡ ವಿಶ್ವವಿದ್ಯಾಲಯ ಬೆಳಗಲ್ಲು ವೀರಣ್ಣನವರಿಗೆ-“ನಾಡೋಜ”ಕರುಣಿಸಿತು!
ಬಳ್ಳಾರಿಯ ಸ್ಥಳೀಯ ಆಡಳಿತ ಬೆಳಗಲ್ಲು ವೀರಣ್ಣನವರಿಗೆ-“ಕಾಡೋಜ”ದಯಪಾಲಿಸಿತೇ!!
ಇದೊಂದು ವಿಧಿಲೀಲೆಯೆಂದು ಸುಮ್ಮನಾಗೋಣವೇ?!
-ಟಿ.ಕೆ. ಗಂಗಾಧರ ಪತ್ತಾರ್, ಹಿರಿಯ ಸಾಹಿತಿಗಳು, ಬಳ್ಳಾರಿ