ಅನುದಿನ ಕವನ-೮೨೬, ಕವಿಯಿತ್ರಿ: ದಾಕ್ಷಾಯಿಣಿ ಶಂಕರ, ಮಹಾಲಿಂಗಪುರ, ಕವನದ ಶೀರ್ಷಿಕೆ: ಸಾರ್ಥಕ್ಯ

✍️✍️ಸಾರ್ಥಕ್ಯ ✍️✍️

ನಾನು ಅದೆಷ್ಟೋ ಅಕ್ಷರಗಳನ್ನು
ಪಳಾದ ಮೇಲೆ ಬರೆದಿರಬಹುದು
ನನ್ನನ್ನು ನಂಬಿ ಬಂದ ಮಕ್ಕಳು
ಓದಲಿ ಬರೆಯಲಿ ಎಂಬ ಹಂಬಲದಿಂದ
ಆ ಎಲ್ಲ ಅಕ್ಷರಗಳನ್ನು ಅಕ್ಕರೆಯಿಂದ
ಡಸ್ಟರ್ನಿಂದ ಒರೆಸಿರಲೂಬಹುದು
ಆ ಎಲ್ಲ ಮಕ್ಕಳು ಅವುಗಳನ್ನು
ಕಲಿತಿದ್ದಾರೆ ಎನ್ನುವ ನಂಬಿಕೆಯಿಂದ..

ಆ ಡಸ್ಟ್ ರಿಗೆ ಅದೆಷ್ಟು ಖುಷಿ ..
ನಾನು ನನ್ನ ಕೆಲಸವನ್ನು ನಿಷ್ಠೆಯಿಂದ
ಮಾಡಿರುವೆ ಎನ್ನುವ ನೆಮ್ಮದಿ
ಡಸ್ಟರಿನ ಧೂಳಿನ ವಾಸನೆಯೂ
ಯಾವ ದೇವಾಲಯದ ಪರಿಮಳಗಳಿಗೂ
ಕಡಿಮೆ ಇಲ್ಲ ಎನ್ನುವ ಸಂತಸ
ಅದೆಷ್ಟೋ ಮಕ್ಕಳ ಭವಿಷ್ಯವನ್ನು
ತನ್ನಲ್ಲಡಗಿಸಿಕೊಂಡು ಧೂಳಾಗಿ
ಪಳಾದ ಹೊಳಪನ್ನು ಹೆಚ್ಚಿಸಿದೆನೆಂದು..

ನಾನು ಶಿಕ್ಷಕಿ ಎಂದು ಹೆಮ್ಮೆಪಡುತ್ತೇನೆ
ನನ್ನೊಳಗೊಬ್ಬ ತಾಯಿಯಿರುವ ಕಾರಣಕ್ಕಾಗಿ
ಸಹಸ್ರಾರು ಮಕ್ಕಳ ಒಲುಮೆಯನ್ನು
ಸ್ವೀಕರಿಸಿ ಅವರ ಭವಿಷ್ಯಕ್ಕೆ ಬುನಾದಿಯಾಗಿ
ಅವರುಗಳನ್ನು ಪೋಷಿಸುವ ಪರಿಕರವೊಂದು ನಾನಾಗಿರುವೆ ಎಂಬ ಅಹಂನಿಂದ ಹೇಳುವೆ
ಡಸ್ಟರಿನ ಸಾರ್ಥಕ್ಯದಲ್ಲಿ ನನ್ನದು ಪಾಲಿದೆ
ಎನ್ನುವ ಹೆಮ್ಮೆಯೂ ಮನಕೆ ಮುದನೀಡಿದೆ..


-✍️ ದಾಕ್ಷಾಯಣಿ ಶಂಕರ, ರಬಕವಿ ಬನಹಟ್ಟಿ ✍️

*****