ಹೆಜ್ಜೆ ಹಾಕುತ್ತಿರು
ಸಮಸ್ಯೆಗಳು ಹೇಳಿ ಬರುವುದಿಲ್ಲ ಸವಾಲು ಎದುರಿಸಿ ಭರವಸೆಯಿಂದ ಹೆಜ್ಜೆ ಹಾಕುತ್ತಿರು||
ಉಂಡುಟ್ಟು ತಿರುಗಿ ಬೀಳುವ ಜನರು ಇದ್ದೇ ಇರುವರು ಎಚ್ಚರಿಕೆಯಿಂದ ಹೆಜ್ಜೆ ಹಾಕುತ್ತಿರು||
ಹರಕೆ ಹೊತ್ತು ಬೇಡಿ ಪಡೆದವರೇ ನಡು ಬೀದಿಯಲ್ಲಿ ಬಿಟ್ಟು ನಡೆಯುತ್ತಿರಲು ಮಾನವೀಯತೆ ಮೌನವಾಗಿದೆ|
ಹೆರವರ ಹೆಗಲಿಗೆ ಜವಾಬ್ದಾರಿ ಹೇರಿ ಮೆರವಣಿಗೆ ಹೊರಟವರ ಮುಂದೆ ಜಾಣ್ಮೆಯಿಂದ ಹೆಜ್ಜೆ ಹಾಕುತ್ತಿರು||
ಸುಳ್ಳುಗಳನ್ನೇ ಸತ್ಯವೆಂದು ಬಿಂಬಿಸುತ್ತಿದ್ದರೆ ನಂಬುವ ಮೂರ್ಖರು ಇರುವವರೆಗೂ ಅದು ನಿಜವೆನಿಸುವುದು|
ಅಂತರಂಗದ ಅರಿವು ಯಾರ ಮಾತೂ ಕೇಳುವುದಿಲ್ಲ ಪ್ರಾಮಾಣಿಕತೆಯಿಂದ ಹೆಜ್ಜೆ ಹಾಕುತ್ತಿರು||
ಮುಳ್ಳಿನ ದಾರಿಯಲ್ಲಿ ಯಾರೂ ನಡೆಯಲಾರರು ಸುಂದರವಾದ ಮಾರ್ಗದಲ್ಲಿ ಎಷ್ಟು ಸಾಗಿದರೂ ದಣಿವಿಲ್ಲ|
ದುರುಳರು ಮುಳ್ಳನ್ನೇ ಬಿತ್ತಿದರೂ ಅವನ್ನೆಲ್ಲ ಎತ್ತಿ ಪಕ್ಕಕ್ಕೆ ಎಸೆಯುತ್ತ ಪ್ರೀತಿಯಿಂದ ಹೆಜ್ಜೆ ಹಾಕುತ್ತಿರು||
‘ಗಟ್ಟಿಸುತ’ ದುಷ್ಟರನ್ನೇ ದೂರ ತಳ್ಳುವರು ಒಳ್ಳೆಯದನ್ನು ಬಯಸಿದವರು ಸತ್ತು ಹೋದರೂ ಬದುಕಿರುವರು|
ಕಷ್ಟ ಎಷ್ಟಿದ್ದರೇನು ಬದುಕು ಬಂಡಿ ಪಾಜಿ ಮುಟ್ಟಲೇ ಬೇಕು ತಾಳ್ಮೆಯಿಂದ ಹೆಜ್ಜೆ ಹಾಕುತ್ತಿರು||
-ಎಂ.ಡಿ.ಬಾವಾಖಾನ ಸುತಗಟ್ಟಿ, ಬೆಳವಡಿ