ಅನುದಿನ‌ ಕವನ-೮೩೦, ಕವಿ: ಡಾ. ಬಿ ಆರ್ ಕೃಷ್ಣಕುಮಾರ್, ಚಾಮರಾಜ ನಗರ, ಕವನದ ಶೀರ್ಷಿಕೆ: ಅಪ್ಪ, ಸೈಕಲ್ ಮತ್ತು ನಾನು

ಅಪ್ಪ, ಸೈಕಲ್ ಮತ್ತು ನಾನು

ನನ್ನಪ್ಪ ಸ್ಕೂಲ್ ಮಾಸ್ಟರ್
ಅವ್ವಳಿಗೆ ದೇವರ ರೂಪ
ಮಕ್ಕಳಿಗೆ ಕಲ್ಪವೃಕ್ಷ ದೀಪ
ಶಿಷ್ಯರಿಗೆ ಅಚ್ಚುಮೆಚ್ಚಿನ ಗುರು
ಬಂಧುಗಳಿಗೆ ಮರೆಯಲಾಗದ ಪ್ರೀತಿಪಾತ್ರ.

ಅಪ್ಪನಿಗೆ ಸೈಕಲ್ ಎಂದರೆ
ಜೀವದ ಒಡನಾಡಿ
ಇಪ್ಪತ್ತು ಮೈಲಿ ದೂರದ ಸ್ಕೂಲಿಗೆ
ಜೊತೆಯಾದ ಜೊತೆಗಾರ.

ಒಮ್ಮೊಮ್ಮೆ ಬಿದ್ದದ್ದುಂಟು;
ಗಾಯಗಳಿಲ್ಲ: ಹಾನಿಯಿಲ್ಲ
ಇಬ್ಬರಿಗೂ ಬೇಸರವಂತು ಇಲ್ಲ
ದಣಿವಿಲ್ಲ ಕಾಲಿಗೆ, ಎರಡು ಗಾಲಿಗೆ.

ಮನೆಯೊಳಗೆ ಮತ್ತೊಬ್ಬ ಮನೆಮಗ
ಅದಕ್ಕೆ ಪ್ರತಿದಿನ ಶೃಂಗಾರ
ಭಾನುವಾರ ಅತಿ ಶೃಂಗಾರ
ಹಬ್ಬಕ್ಕೆ ಎಲ್ಲಿಲ್ಲದ ಸಡಗರ.

ಒಮ್ಮೊಮ್ಮೆ ಸೈಕಲ್ಲಿನ ಹಿಂದೆ
ಮಗದೊಮ್ಮೆ ಮುಂದೆ ಕೂತ ನನಗೆ
ಅಂಬಾರಿಯ ಸುಖ ಪಯಣ
ಗೊತ್ತಾಗಲಿಲ್ಲ ಎಳೆ ಮನಕ್ಕೆ
ಅಪ್ಪನ ದಣಿವು- ಒಲವು.

ನೆನಪುಗಳ ಬಿಟ್ಟು
ಬಲು ದೂರ ಹೋದ ಅಪ್ಪನ ನೆನೆದು
ನಾನು ಕಣ್ಣೀರುಗರೆದರೆ…
ಮೂಲೆಯಲ್ಲಿ ಧೂಳು ಧರಿಸಿ ನಿಂತ
ಸೈಕಲ್ಲಿನ ಮೌನ ಅಳು.


-ಡಾ.ಬಿ.ಆರ್.ಕೃಷ್ಣಕುಮಾರ್, ಚಾಮರಾಜ ನಗರ
*****