ಭೀಮಭಾಸ್ಕರ
ಕಾರುಣ್ಯದ ಸಿಂಧುವೆ ಬೆಂದವರ ಬಂಧುವೆ
ನೊಂದವರ ತಂದೆಯೆ ಭೀಮಬಂಧುವೇ
ಶತಮಾನದ ಸರಳುಗಳಲಿ ನರಳಿವೆ ಜೀವ
ಬಳಲಿದ ಬಂಧುಗಳಿಗೆ ಬಿಡುಗಡೆಯ ಭಾವ
ದಮನಿತರ ಎದೆಗಳಲಿ ಬರೀ ನೋವು-ನರಕ
ಬೆವರಳಿಸಿ ಭರವಸೆಯ ತಂದಿ ಈ ಜನಕ
ಕಾರ್ಮೋಡದ ಆಗಸದಲಿ ಕೋಲ್ಮಿಂಚು ಮಿಂಚಿ
ಬಾಳಂಗಳ ತಂಗಾಳಿಗೆ ಕಾಯುತಿದೆ ಹೊಂಚಿ
ಬಿರುಕು ಬಿಟ್ಟ ಭೂಮಿಯಲಿ ಒರತೆಯೆಲ್ಲ ಬತ್ತಿ
ಸಂಘರ್ಷದ ನೆಲದೊಳಗೆ ಸಮತೆಬೀಜ ಬಿತ್ತಿ
ದನಿಯಿಲ್ಲದ ಜನರೆಲ್ಲಾ ಇಹರು ಊರಹೊರಗೆ
ದನಿ ತುಂಬಲು ಬಂದಿಹರು ಭೀಮ ನಮ್ಮ ಬಳಿಗೆ
ಮುಳ್ಳಿಲ್ಲದ ಬೇಲಿಯಲ್ಲಿ ಹೂವು ಅರಳಿತೆಂತು ?
ಸುಳ್ಳಾಡದ ಹೃದಯಗಳಲಿ ಬುದ್ಧ ನೆಲೆನಿಂತು
ದುಡಿದುಡಿದು ಸತ್ತ ಜನಕ ಎಲ್ಲಿಹುದು ಕನಕ
ಶೋಷಣೆಗೆ ಕೊನೆ ಹಾಡಿದ ಭೀಮನೆಂಬ ಬೆಳಕ
ಇಲ್ಲೀತನಕ ಹರಿದಿದೆ ಇಲ್ಲದವರ ನೆತ್ತರ
ಎಲ್ಲದಕೂ ನೀಡಿದ ಭೀಮನದಕೆ ಉತ್ತರ
ಸತ್ತುಸತ್ತು ಹೋದರೂ ಮತ್ತೆಮತ್ತೆ ಜನನ
ಸ್ವಾಭಿಮಾನ ಸತ್ತರೆ ಆ ಕ್ಷಣಕೆ ಮರಣ
ಕಪ್ಪುಜನರ ಕತ್ತಲಕೆ ಉದಯ ಭೀಮಭಾಸ್ಕರ
ಸೋತವರ ಧೀಶಕ್ತಿ ಭೀಮನೆಂದಿಗಮರ
-ಡಾ. ಸಂಗಮೇಶ ಎಸ್. ಗಣಿ, ಹೊಸಪೇಟೆ
*****