ವಿಶ್ವ ಭೂಮಿ ದಿನಾಚರಣೆಯ ಶುಭಾಶಯಗಳೊಂದಿಗೆ,
ಭೂಮಿ ಇವಳು…..
ಆಕಾಶದ ಪ್ರೀತಿಯ ಮಳೆಯಲ್ಲಿ ತೊಯ್ದು
ನಾಚಿದವಳು
ಸೂರ್ಯನ ಬಿರು ಬಿಸಿಲಿಗೂ ಬೇಸರಿಸದೆ
ಬೆಳಗಿದವಳು
ಚಂದಿರನ ಸಂಗದಲ್ಲಿ ಉನ್ಮತ್ತಳಂತೆ
ಮೋಹಿಸಿದವಳು
ತುಂಬು ಗರ್ಭದಿಂದುದಿಸಿದ ಹಸಿರು
ಚಿಗುರುಗಳ ಅಪ್ಪಿ ಹಿಡಿದವಳು
ತನ್ನೊಡಲ ನೋವು ನಲಿವಿನ ಅಲೆಯ
ಹೊಯ್ದಾಟಕ್ಕೆ ಸಾಗರವಾದವಳು
ಇವಳೆದೆಯ ಅಗೆದು ಬಗೆದು ಬೋಳು
ಬಯಲಾಗಿಸಿದವರನ್ನೆಲ್ಲಾ
ಮತ್ತೆ ಮತ್ತೆ ಕ್ಷಮಿಸಿ ತಬ್ಬಿದವಳು.
ಒಡಲುರಿಗೆ ಎದೆಯಾಳದಲ್ಲೆಲ್ಲೋ
ಮಾಯಗಟ್ಟಿ ನಿಂತ ಕಣ್ಣ ಹನಿ ಹನಿಯೆಲ್ಲಾ
ಹಿಂಗಿ ಮುರುಟಿ
ತನ್ನೊಳಗೆ ತಾನೇ ಜ್ವಾಲಾಮುಖಿ ಇವಳು
ಮೇಲೆ ತಣ್ಣಗಿನ ಪ್ರೇಮ ನದಿ
ಯಮುನೆಯಾದವಳು.
ಭೂಮಿ ಇವಳು
ಬಿಕ್ಕುತ್ತಲೇ ಅಳು ಮರೆಸಿ
ಮಾಯದ ನಗೆ ನಕ್ಕ ಮಾಟದವಳು.
ಭೂಮಿ…..ನನ್ನವಳು , ನಿಮ್ಮವಳು…
ನಮ್ಮೆಲ್ಲರವಳು.
-ಲಾವಣ್ಯ ಪ್ರಭ, ಮೈಸೂರು
*******