ಅನುದಿನ ಕವನ-೮೪೩, ಕವಿ: ಸಿದ್ಧರಾಮ ಕೂಡ್ಲಿಗಿ, ವಿಜಯನಗರ ಜಿ. ಕವನದ ಶೀರ್ಷಿಕೆ: ನಾನೊಂದು ಪುಸ್ತಕ

🌺🍀💐🍀ಕರ್ನಾಟಕ ಕಹಳೆ ಸಾಹಿತ್ಯ ಬಳಗದ ಹಿರಿಯ, ಉದಯೋನ್ಮುಖ ಕವಿ, ಕವಿಯಿತ್ರಿಯರಿಗೆ, ಕಾವ್ಯ ಹಾಗೂ ಪುಸ್ತಕ ಪ್ರಿಯರಿಗೆಲ್ಲಾ ವಿಶ್ವ ಪುಸ್ತಕ ದಿನದ ಶುಭಾಶಯಗಳು🌺🍀💐🌺(ಸಂಪಾದಕರು)

ನಾನೊಂದು ಪುಸ್ತಕ

ನಾನೊಂದು ಪುಸ್ತಕ
ನನ್ನನ್ನು ಓದುವವರು ಇನ್ನೂ
ಓದುತ್ತಲೇ ಇದ್ದಾರೆ
ಕೆಲವರಿಗೆ ಅರ್ಥವಾಗಿಲ್ಲ
ಕೆಲವರಿಗೆ ಅರ್ಥವಾದರೂ
ಪ್ರತಿಕ್ರಿಯೆ ನೀಡಿಲ್ಲ
ಅರ್ಥ ಮಾಡಿಕೊಂಡವರು
ಬೇರೆಯವರೆದುರು ಹೇಳಿದರೂ
ಅವರೆಷ್ಟು ಅರ್ಥ ಮಾಡಿಕೊಂಡಿರುವರೋ ಗೊತ್ತಿಲ್ಲ
ನಾನೊಂದು ಪುಸ್ತಕ

ಪುಸ್ತಕದ ಪುಟಗಳು ಇನ್ನೂ
ಮುಗಿದಿಲ್ಲ,
ಬದುಕು ಇನ್ನೂ ಬರೆಯುತ್ತಲೇ ಇದೆ
ಕಂಡದ್ದು, ಅನುಭವಿಸಿದ್ದು
ಎಲ್ಲವೂ ಅಕ್ಷರಗಳಲಿ ಅಡಕಗೊಳ್ಳುತಿವೆ
ಪುಸ್ತಕದ ಕೊನೆ ಹೇಗೆಂಬುದು
ಬರೆಯುವವನಿಗೇ
ನಂತರ ಓದುವುವರಿಗೆ
ಮಾತ್ರ ಗೊತ್ತು

ಮುದ್ರಣವಿಲ್ಲದ
ಅಕ್ಷರಗಳಿಲ್ಲದ
ಏನೆಲ್ಲವೂ ಒಳಗೊಂಡಿರುವ
ಈ ಪುಸ್ತಕ ಪೂರ್ಣಗೊಂಡನಂತರ
ಮಸಣದಲ್ಲಿ ಇದರ ಬಿಡುಗಡೆ
ಭುವಿಯ ಗ್ರಂಥಾಲಯದಲ್ಲಿ
ಇದೂ ಒಂದು ಕಾಣದ ಪುಸ್ತಕವಾಗಿ
ಸೇರ್ಪಡೆ


-ಸಿದ್ಧರಾಮ ಕೂಡ್ಲಿಗಿ, ವಿಜಯನಗರ ಜಿ.
*****