ನಿಂಗವ್ವಳ ಚುನಾವಣಾ ಪ್ರಚಾರ (ವಿಡಂಬನೆ) ಬರಹ: ಶೋಭ ಮಲ್ಕಿಒಡೆಯರ್, ಹೂವಿನ ಹಡಗಲಿ

 

ಬೆಳಿಗ್ಗೆ ಆರು ಗಂಟೆ ಹೊತ್ತಿಗೇ ಕೈಯಲ್ಲಿ ಸ್ಮಾರ್ಟ್ ಫೋನ್ ಹಿಡಿದು ದೌಡಾಯಿಸಿ ಬಂದ ನಿಂಗಿ”ದನಲಕ್ಸಮಕ್ಕ ದನಲಕ್ಸಮಕ್ಕ ಒಸಿ ಕದ ತಗೀರಿ” ಕೆಲಸದ ನಿಂಗಿ ಒಂದೇ ಸಮನೆ ಬಾಗಿಲು ಬಡಿಯುವ ಸದ್ದಿಗೆ ಯಾರಿರಬಹುದು ಎಂದು, ಕಣ್ಣುಜ್ಜುತ್ತ ಮನೆಯೊಡತಿ ಧನ ಲಕ್ಷ್ಮಿ ಬಾಗಿಲು ತೆರೆದಾಗ,
“ಅಯ್ಯೊ ನಿಂಗಿ, ಬೆಳಿಗ್ಗೆನೆ ಬಂದಿಯಲ್ಲೇ !? ಏನವಸರ ? ಮಧ್ಯಾನ್ಹ ಆದ್ರೂ ಒಂದೊಂದಿನ ಬರದೇ ಇರೋಳು ಏನಿವತ್ತ! ಇಷ್ಟು ಬೇಗ !!” ಮನೆಯೊಡತಿ ಒಂದೇ ಉಸುರಿಗೆ ಕೇಳಿದಾಗ
“ಇನ್ನು ಮುಂದೆ ಪಾತ್ರೆ ಗಿತ್ರೆ ತೊಳೆಯಾಕ ಬರಕಿಲ್ಲ ಕಣ್ರವ್ವ, ನಮಗೂ ಒಸಿ ದಿನ ರಜಾ ಬೇಕು. ಈ ಎಲೆಕ್ಸನ್ ಟೈಮಾಕೆ ನನ್ನ ಗಂಡ ಮನಿ ಬಿಟ್ಟು ಎಲ್ಲೂ ಹೋಗ್ಬೇಡಾ…ನೀನು ಮನಿ ಒಳಿಕ್ಕೇ ಇರು” ಅಂತಾ ತಾಕೀತು ಮಾಡವ್ನೆ…ಅದ್ಕೆ ಎಲೆಕ್ಸನ್ ಮುಗಿಗಂಟಾ ನಾನು ಬರಕಿಲ್ಲ. ನಿಮ್ದು ಚೆಂದಾಗಿರೋ‌ ಎರಡು ಸೀರೆ ಇದ್ರೆ ಕೊಡ್ತೀರಾ ಅಮ್ಮವ್ರೆ?”
“ಅಲ್ಲಾ ನಿಂಗಿ, ಎಲೆಕ್ಷನ್ ಟೈಮಲ್ಲಿ ನಿನ್ನ ಕೆಲಸ ಏನು?”
“ಅಯ್ಯೊ ಅದ್ಯಾಕ ಕೇಳೀರಾ…ಒಂದೆ ಎರಡೆ ಹೇಳಾಕೆ. ಮೊದ್ಲು ಹಳ್ಯಾಗ ಇದ್ದ ಆ ಮುದ್ಕಿ(ಅತ್ತೆ) ನ ಕರ್ಕೊಂಡ್ಬಂದು ಬಾಗಲ ಮುಂದ ಕುಂದ್ರಸಬೇಕು, ಯಾಕ ಅಂತಾ ಕೇಳಿ..ಪ್ರತಿ ತಿಂಗ್ಳು ಎರಡ ಸಾವಿರ ಕೊಡ್ತಾರಂತೆ ! ಇನ್ನು ನನ್ನ ಸಂಘದಾಗ ನಾನ ಲೀಡ್ರು….ಎಲ್ಲಾನ್ರೂ ಬೆಟ್ಟಿ ಮಾಡಬೇಕು, ಅವರ ಮನ ಒಲಸ್ಬೇಕು ಪಕ್ಷದಿಂದ ಬರುವ ಸೀರಿ, ಕುಕ್ಕರ್ ಮನಿ ಮನಿಗೆ ಹೋಗಿ ತಲುಪಿಸಬೇಕು …ಇನ್ನು ಇನ್ನೂ ಬಾಳ ಬಾಳ ಕೆಲ್ಸ ಕಣ್ರವ್ವ” ಎಂದು ಸೀರೆ ಗಾಗಿ ಮತ್ತೊಮ್ಮೆ ನೆನಪಿಸಿದಳು.
‌‌‌‌ “ಅಲ್ಲಾ ನಿಂಗಿ, ನಮ್ಮಮನೆಯಲ್ಲಿ ಮಗಳ ಹೆರಿಗಿ ಆಗೇತಿ ನೀ ಹಿಂಗ ಕೆಲಸಾ ಬಿಟ್ರ ಮತ್ತ ಯಾರನ್ನು ಹುಡುಕಬೇಕು” ಆತಂಕದ‌ ಪ್ರಶ್ನೆ.
“ಅವ್ವಾರ ಬಸುರು ಬಾಣಂತನ ಎಲ್ಲಾರ ಮನ್ಯಾಗ ಇದ್ದದ್ದ.. ಆದ್ರs ಐದು ವರ್ಸಕ್ಕ‌ಬರೋ ಅದೃಷ್ಟ ಕಳಕನಾಕ ಯಾರು ತಯ್ಯಾರ ಇರ್ತಾರ ?” ‘ಅತ್ತಲಿಂದ ಗಂಡನ ಫೋನ್ ಕರೆಗೆ “ಈ ಸದ್ದೇ ಬರ್ತಾಇವ್ನಿ…ನೀನು ಬಂದಬಿಡು”
“ಬಂದೆ ಕಣಮ್ಮಿ, ಇವತ್ತು ಇಬ್ರೂ ಹೋಟಲ್ದಾಗ ತಿಂಡಿ ತಿನ್ಕಂಡ ಲೀಡರ ಜೊತಿಗೆ ಹೋಗೋಮ ಬಾ…ಊರಾಗ ಒಸಿ ಪ್ರಚಾರಕ್ಕ”
“ಆಯ್ತು ಕಣ್ರವ್ವ….ನಾ ಬತ್ತೀನಿ ಸೀರೆಗಳನ್ನು ತಗೊಂಡು ಗತ್ತಿನಲ್ಲಿ ಹೊರಟ ನಿಂಗಿಯನ್ನು ತದೇಕ ಚಿತ್ತದಿಂದ ನೋಡುತ್ತ ನಿಂತಳು ಮನೆಯೊಡತಿ. ಮುಸುರೆ ತಿಕ್ಕೊಂಡು ಇದ್ದ ನಿಂಗಿ ಮನಸ್ನಾಗ ರಾಜಕೀಯದ ಗಾಳಿ ಬೀಸಿದ್ದು ಸೋಜಿಗ ತರಿಸಿತ್ತು.

-ಶೋಭಾ ಮಲ್ಕಿ ಒಡೆಯರ್
ಹೂವಿನ ಹಡಗಲಿ