ನಿಂತ ನೀರಾಗಿಲ್ಲ
ಹರಿಯುತ್ತಲೇ ಬಂದಿದ್ದೇನೆ…
ಬಾಲ್ಯದಿಂದ ಯೌವನಾವಸ್ಥೆ,
ಮತ್ತಲ್ಲಿಂದ ಪ್ರೌಢಾವಸ್ಥೆ..
ಇದೀಗ ವೃದ್ಧಾಪ್ಯದ ಮೆಟ್ಟಲೇರಿ
ಕುಳಿತಲ್ಲಿಯವರೆಗೆ….
ಬದುಕಿನ ವ್ಯವಸ್ಥೆ, ಅವ್ಯವಸ್ಥೆಗಳ
ಹಂತಹಂತಗಳಲ್ಲಿ,
ಕೊರಕಲು ಬಂಡೆಗಳ ನಡುವೆ-
ಸುತ್ತಿಬಳಸಿ ಕಾಡುವ ಗೊಡವೆ-
ಯೊಳಗೆ ಬಾಗಿತೂಗಿ,
ಸೊರಗಿದಾಗ ಮರುಗಿ
ತುಂಬಿದಾಗ ಉಬ್ಬಿ
ಭೋರ್ಗರೆಯುತ್ತ, ಇಲ್ಲ ಗೋಗರೆಯುತ್ತ!
ಹರಿಯುತ್ತಲೇ ಬಂದಿದ್ದೇನೆ.
ಹಂತಹಂತಗಳಲ್ಲಿ ಕಂಡಾಗ ರಚ್ಚೆ
ಅದೆಷ್ಟು ಕೊಚ್ಚೆ
ಬಂದು ಸೇರಿಕೊಳ್ಳುತ್ತದೋ,
ಅದನ್ನು ಸ್ವಚ್ಚ ಮಾಡಿಕೊಳ್ಳುವಲ್ಲಿ,
ಮನಮಂಥನ, ಆತ್ಮಚಿಂತನದಲ್ಲಿ
ಬದುಕು ಪರಿಧಿಗೆ ಹಿಗ್ಗಲಿಸಿ
ಮತ್ತಷ್ಟು ಹರವು ಹೆಚ್ಚಿಸಿಕೊಳ್ಳುವಲ್ಲಿ,
ಒಂದಷ್ಟು ಕೊರಗಿದರೂ,
ಅಷ್ಟಿಷ್ಟು ಸೊರಗಿದರೂ,
ಹರಿಯುವಿಕೆಯಂತೂ ನಿಂತಿಲ್ಲ.
ಅದೆಷ್ಟು ನೆಲ ಕುಸಿದಿದ್ದರೂ,
ಇಬ್ಬದಿಗಳು ಮುಚ್ಚಿಕೊಳ್ಳುತ್ತಿದ್ದರೂ.
ಸಧ್ಯ ನಿಂತ ನೀರಾಗಿಲ್ಲ,
ದಡ ಸೇರಲೆಂದು ಹರಿದಿದ್ದೇನೆ,
ಹರಿಯುತ್ತಲೇ ಬಂದಿದ್ದೇನೆ.
-ಮೋಹನ್ ವೆರ್ಣೇಕರ್, ಮೈಸೂರು *****