ಅನುದಿನ ಕವನ-೮೫೦, ಕವಿಯಿತ್ರಿ: ಶೋಭ ಮಲ್ಕಿಒಡೆಯರ್, ಹೂವಿನ ಹಡಗಲಿ, ಕವನದ ಶೀರ್ಷಿಕೆ: ಶ್ರಮಿಕರು

ಕಾರ್ಮಿಕ ದಿನಾಚರಣೆಯ ಶುಭಾಶಯಗಳೊಂದಿಗೆ🍀💐


ಶ್ರಮಿಕರು

ಶ್ರಮಿಸುವ ಶ್ರಮಿಕರು
‌ನೆನಪಿಗೆ ಬರುವರು ಇಂದು
ಅದುವೇ ಕಾರ್ಮಿಕರ ದಿನಾಚರಣೆ
ವಿಶೇಷವಿಹುದು ಮೇ ಒಂದು ||

ಹಸಿವು ಬಾಯಾರಿಕೆಯ ಹಂಗಿಲ್ಲದ ದುಡಿತ
ಅಹೋರಾತ್ರಿ, ಬದುಕಿನ ಗಂಜಿಗಾಗಿ
ಪುಡಿಗಾಸು ಗಳಿಕೆಯಲ್ಲೇ ತೃಪ್ತಿ ಪಡುವ ಜೀವ
ನಿತ್ಯ ನಿಂತಿದೆ, ಭವಿಷ್ಯ ಸವಾಲಾಗಿ ||

ನಿನ್ನವರ ಗೇಣು ಹೊಟ್ಟೆ – ಬಟ್ಟೆ ಮುಚ್ಚಲು
ಅವಿರತ ಸಹನೆಯ ಹೋರಾಟ
ನಿನ್ನೊಳಗೆ ನಿನ್ನತನವ ಮೆಟ್ಟಿ ನಿಲ್ಲಲು
ಸಮಾಜದೊಳು ಕೂಗು, ಬರೀ ಹಾರಾಟ ||

ಪುಟ್ಟ – ಪುಟ್ಟ ಮಕ್ಕಳೂ ಹೆಜ್ಜೆ ಹಾಕುತ್ತಿವೆ
ಹೆತ್ತವರೊಂದಿಗೆ , ಶಾಲೆಯ ಮೆಟ್ಟಿಲು ಏರದೆ !
ಸರಕಾರ ಯೋಜನೆ ರೂಪಿಸಿದರೂ
ಎಲ್ಲೆಲ್ಲೊ ಸೋರಿ ಹೋಗುತಿದೆ ಕೈಗೆ ದಕ್ಕದೆ ||

ರಾಜ್ಯದಾದ್ಯಂತ ಬರೀ ಘೋಷಣೆಯ ಕೂಗು
ದಣಿಗಳ ಹಿಡಿತದಲ್ಲಿ ಜೀತದಾಳುಗಳ ಅಳಲು
ಇಂದಿಗೆ ನಿಲ್ಲುವುದೆ !? ಪೀಳಿಗೆಗಳ ಪಾರಂಪರ್ಯ
ಇದುವೇ ಕಾರ್ಮಿಕರ ಅಹವಾಲು ||

-ಶೋಭಾ ಮಲ್ಕಿ ಒಡೆಯರ್🖊️
ಹೂವಿನ ಹಡಗಲಿ
*****