ಯಾರದೋ
ಜಮೀನಿಗೆ
ಬೆವರು ಸುರಿದ
ಅಪ್ಪ
ಕಣ್ಣೀರಷ್ಟೇ ಕುಡಿದ!
ಎಷ್ಟೊಂದು
ಮನೆಗಳಿಗೆ
ಸುಣ್ಣ ಬಣ್ಣ
ಬಳಿದ
ಅವ್ವ
ತನ್ನ ಮನೆಯ ಗೋಡೆಯ
ಬಿರುಕಿಗೆ ಮಣ್ಣು
ಮೆತ್ತುತ್ತಿದ್ದಳು!
ಯಾರ್ಯಾರದೋ
ಅಲ್ಲಂಡೆಗಳಿಗೆ ಸಲ್ಲುತ್ತ
ತನ್ನವರಿಗೇ
‘ಇಲ್ಲ’ವಾಗುತ್ತ ಹೋದ ಅಪ್ಪನಿಗೆ
ಊರಿಗೆ ಕೇಡಾಗದ ಕನಸು!
ಕರೆದವರ ಮನೆಗಳಲ್ಲಿ
ಒಲೆ ಹಾಕಿಕೊಡುತ್ತಿದ್ದ
ಅವ್ವನಿಗೆ
ತನ್ನ ಮನೆಯಲ್ಲಿ
ಒಪ್ಪೊತ್ತಾದರೂ
ಒಲೆ ಉರಿಯಲೆಂಬ ಆಸೆ!
ರಂಗದ ಮೇಲೆ ನಟಿಸಿ
ಹರಿಕಥೆಯನ್ನು,ಲಾವಣಿಗಳನ್ನೂ
ನಮ್ಮೆದೆಗಿಳಿಸಿದ ಅಪ್ಪ
ತನ್ನವರ ದ್ರೋಹಗಳಿಗೂ
ತೆರೆದ ಬಯಲಾಗಿಬಿಟ್ಟ!
ಹಗಲಿರುಳೆನ್ನದೆ
ಅವರಿವರ ಮನೆಯಲ್ಲಿ
ರಾಗಿ ಬೀಸಿ
ಭತ್ತ ಕುಟ್ಟಿ
ತನ್ನ ಮಕ್ಕಳ ತುತ್ತಿನಲ್ಲೇ
ಬೀದಿಯ ಮಕ್ಕಳ
ಹಸಿವ ತಣಿಸಿದ
ಅವ್ವ
ಬಯಲಲ್ಲಿ ಬಯಲಾದಳು!
ಅಪ್ಪನ
ಸೋಮನ ಕುಣಿತ
ಅವ್ವ ಬದುಕಿದ
ಅಸಂಖ್ಯ ಕವಿತೆಗಳು
ಈಗಲೂ ಜೀವಂತ!
ಅಪ್ಪ
ಮಲಗಿದ್ದಾನೆ
ತಾನು ಕನಸಿದ
ತನ್ನ ಮಕ್ಕಳು ದುಡಿದ
ಮಣ್ಣಿನಲ್ಲಿ..
ತನ್ನ ಅಷ್ಟೂ ಬೆವರ ಬಸಿದ
ಅವ್ವನೂ ಮಣ್ಣಾಗಿ ಬೆಳೆಯುತ್ತಿದ್ದಾಳೆ
ಅದೇ ತೋಟದಲ್ಲಿ…..
-ರಂಹೊ, ತುಮಕೂರು
- *****