ಬುದ್ದ ಪೌರ್ಣಿಮೆ ಶುಭಾಶಯಗಳೊಂದಿಗೆ,
ಬುದ್ದ ಎಲ್ಲರೂ ನಿನ್ನಂತಾಗುವದಿಲ್ಲ…!
ನೀನೋ
ವಿಶ್ವಶಾಂತಿಗಾಗಿ
ಮಾನಸಿಕ ತುಮುಲಗಳ
ಹೊಯ್ದಾಟದಲಿ
ಸಿಲುಕಿ ನರಳಿದವನು…
ನಡುರಾತ್ರಿಯಲಿ
ಸುಖಭೋಗಗಳ ತೊರದವನು…
ಬುದ್ದ….ಎಲ್ಲರೂ ನಿನ್ನಂತಾಗುವುದಿಲ್ಲ….!
ಭವಬಂಧನಗಳ ಕಳಚಿ
ಇಹದ ಭೋಗಲಾಲಸೆಗಳ
ಬದಿಗಿಟ್ಟು ಸತಿಸುತರ
ಆಸೆಯನು ಬಿಟ್ಟವನು
ಮನೋವ್ಯಾಕುಲಗಳ
ಅದುಮಿಟ್ಟು ಬುದ್ದನಾದವನು
ಬುದ್ದ…. ಎಲ್ಲರೂ ನಿನ್ನಂತಾಗುವುದಿಲ್ಲ….!
ಆಸೆ ರೋಷ ಕಾಮ ಕ್ರೋಧಾಸೂಹೆಗಳ
ಸುಟ್ಟು ಬೂದಿಮಾಡಿ
ವಿಚಲಿತನಾಗದೆ ಬದ್ದನಾಗಿ
ಚಿತ್ತದಲಿ ಕಿಂಚಿತ್ತು ಕ್ಲೇಶವಿರದೆ
ಜಗಕೆ ಬೆಳಕಾದವನು
ಆಸೆಯೆ ದುಃಖಕ್ಕೆ ಮೂಲವೆಂದವನು
ಬುದ್ದ….ಎಲ್ಲರೂ ನಿನ್ನಂತಾಗುವುದಿಲ್ಲ….!
ನೀನು ಬೇಡವೆಂದಿದ್ದನ್ನು ನಾವು
ಬೆನ್ನುಹತ್ತಿ ಬೇತಾಳದಂತೆ ಹಿಡಿದಿದ್ದೇವೆ
ಅಭಿಪಸೆಗಳ ತೊಳಲಾಟದಿ
ಬಿದ್ದು ಜೇಡನ ಬಲೆಯಲಿ ಸಿಲುಕಿದ
ಹುಳುವಾಗಿದ್ದೇವೆ…
ನಿನ್ನ ದಾರಿಯ ಅನುಸರಿಸದೆ
ಒಳಗಿನ ತಾಕಲಾಟಗಳ ಮಧ್ಯೆ
ರಸತಗೆದ ಕಬ್ಬಾಗಿದ್ದೇವೆ…
ಬುದ್ದ…..ಎಲ್ಲರೂ ನಿನ್ನಂತಾಗುವುದಿಲ್ಲ…!
ಮಡದಿಯ ಚಿಂತೆಯೊಮ್ಮೆ
ಮಕ್ಕಳ ಚಿಂತೆಯೊಮ್ಮೆ
ಚಿಂತೆಗಳ ಸಂತೆಯಲಿ
ಮನವಿದು ಭ್ರಾಂತಿಯಲ್ಲಿ
ತೊಳಲಿ ಬಳಲುತಿದೆ
ದೀಪದ ಸುತ್ತುವ ಪತಂಗವಾಗಿ
ನಿನ್ನಂತೆ ನಾನಾಗದೆ ಒದ್ದಾಡಿದೆ…
ಬುದ್ದ……ಎಲ್ಲರೂ ನಿನ್ನಂತಾಗುವುದಿಲ್ಲ…!
-ಶಂಕರಾನಂದ ಹೆಬ್ಬಾಳ, ಇಳಕಲ್
*****