ರಾಜ್ಯದಲ್ಲಿ ಕಾಂಗ್ರೆಸ್ ಅಲೆ: 130 ರಿಂದ 150 ಸ್ಥಾನ ಪಡೆದು ಕಾಂಗ್ರೆಸ್ ಅಧಿಕಾರ ಚುಕ್ಕಾಣಿ ಹಿಡಿಯಲಿದೆ – ಕೆಪಿಸಿಸಿ ಉಪಾಧ್ಯಕ್ಷ ವಿ ಎಸ್ ಉಗ್ರಪ್ಪ

ಬಳ್ಳಾರಿ, ಮೇ 7: ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಅಲೆ ಇದ್ದು ಈ ಬಾರಿಯ ವಿಧಾನ‌ಸಭಾ ಚುನಾವಣೆಯಲ್ಲಿ 130 ರಿಂದ 150 ಸ್ಥಾನ ಗೆಲ್ಲುವ ಮೂಲಕ ಅಧಿಕಾರ ಚುಕ್ಕಾಣಿ ಹಿಡಿಯಲಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ, ಮಾಜಿ ಸಂಸದ ವಿ ಎಸ್ ಉಗ್ರಪ್ಪ ಅವರು ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಬಿಜೆಪಿ ಈಗಾಗಲೇ ತನ್ನ ಸೋಲನ್ನು ಒಪ್ಪಿಕೊಂಡಿದೆ. ಸೋಲುವ ಭಯ ಇರುವುದರಿಂದ ಪ್ರಧಾನಿ ನರೇಂದ್ರ‌ಮೋದಿ ಅವರು ನವ ದೆಹಲಿಯನ್ನು ಬಿಟ್ಟು ಕರ್ನಾಟಕವನ್ನು ದೇಶದ ರಾಜಧಾನಿಯನ್ನಾಗಿ ಮಾಡಿ ಕೊಂಡಿದ್ದಾರೆ ಎಂದು ವ್ಯಂಗವಾಡಿದರು.
ಕರ್ನಾಟಕ ವಿಧಾನ ಸಭಾ ಚುನಾವಣೆಯ ಫಲಿತಾಂಶ ಮುಂದಿನ ಲೋಕಸಭಾ ಚುನಾವಣೆಯ ದಿಕ್ಸೂಚಿಯಾಗಲಿದೆ. ಈ ಕಾರಣಕ್ಕೆ ಮೋದಿ ಅವರು ಕರ್ನಾಟಕವನ್ನೇ ತಮ್ಮ ಮನೆ ಮಾಡಿಕೊಂಡಿದ್ದಾರೆ.
ಟ್ರಂಪ್ ಗೆ ಅದ ಗತಿಯೇ ಕರ್ನಾಟಕ ಬಿಜೆಪಿಗೆ ಆಗಲಿದೆ ಎಂದು ಲೇವಡಿ ಮಾಡಿದ ಉಗ್ರಪ್ಪ, ನರೇಂದ್ರ ಮೋದಿ ಅವರು ಈ ಹಿಂದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಟ್ರಂಪ್ ಪರ ಚುನಾವಣಾ ಪ್ರಚಾರ ಮಾಡಿದ್ದರು. ಟ್ರಂಪ್ ಸೋತಿದ್ದರು. ಆ ಫಲಿತಾಂಶವೇ ರಾಜ್ಯದಲ್ಲಿ ಬಿಜೆಪಿಗೂ ಬರಲಿದೆ ಎಂದರು.


ಬಳ್ಳಾರಿಯಲ್ಲಿ ನರೇಂದ್ರ ಮೋದಿ ಅವರು ಮಾಡಿದ ಭಾಷಣ ಮುತ್ಸದ್ಧಿತನದಿಂದ ಕೂಡಿರಲಿಲ್ಲ. ಸ್ಥಳೀಯ, ರಾಜ್ಯಕ್ಕೆ ಸಂಬಂಧಿಸಿದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಪ್ರಸ್ತಾಪಿಸದೇ ಕೇರಳ ಸ್ಟೋರಿ ಚಲನ ಚಿತ್ರದ ಬಗ್ಗೆ ಮಾತನಾಡಿದ್ದು ಅವರ ಪ್ರಧಾನಿ ಶೋಭೆ ತರುವಂತದ್ದಲ್ಲ ಎಂದು ಹೇಳಿದರು.
ಬಿಜೆಪಿ ಎಲ್ಲಾ ಮೌಲ್ಯಗಳನ್ನು, ಕಾನೂನು ಮೀರಿ ರೋಡ್ ಶೋ ನಡೆಸುತ್ತಿದೆ ಎಂದು ದೂರಿದ ಅವರು 58 ಸಾವಿರ ಕೇಂದ್ರಗಳಲ್ಲಿ ವರ್ಚುವಲ್ ಮೀಟಿಂಗ್ ಆಯೋಜಿಸಲು ರಾಜ್ಯ ಚುನಾವಣಾ ಅಧಿಕಾರಿಗಳ ಅನುಮತಿಯನ್ನೇ ಪಡೆದಿರುವುದಿಲ್ಲ. ಈ ಕುರಿತು ದೆಹಲಿಯಲ್ಲಿ ಕೇಂದ್ರ ಚುನಾವಣಾಧಿಕಾರಿಗಳಿಗೆ ತಮ್ಮ ಪಕ್ಷದ ಮುಖಂಡರು ದೂರು ಸಲ್ಲಿಸಿದ್ದಾರೆ ಎಂದರು.
ರೋಡ್ ಶೋ ನಡೆಯುವ ಎಲ್ಲಾ ಕಡೆಯೂ ಅನುಮತಿ‌ ಪಡೆಯಬೇಕು. ಇದಕ್ಕೆ ಆಗುವ ಖರ್ಚನ್ನು ಆಯಾ ಕ್ಷೇತ್ರದ ಅಭ್ಯರ್ಥಿಗಳ ಲೆಕ್ಕಕ್ಕೆ ಸೇರಿಸಬೇಕು ಎಂದು ಒತ್ತಾಯಿಸಿದರು.
ಪ್ರಸ್ತುತ ಚುನಾವಣೆ ಸತ್ಯ ಅಸತ್ಯಗಳ ನಡುವಿನ ಸಂಘರ್ಷ ಎಂದು ವ್ಯಾಖ್ಯಾನಿಸಿದ ಉಗ್ರಪ್ಪ ಅವರು ಶುಕ್ರವಾರ ನಡೆದ ಪ್ರಚಾರ ಸಭೆಯಲ್ಲಿ ಪ್ರಧಾನಿಗಳು ಜಿಲ್ಲೆಯ‌ ನಿರುದ್ಯೋಗದ ಸಮಸ್ಯೆ, ಆಪರೇಲ್‌ ಪಾರ್ಕ್, ರೈತರ ತುಂಗಭದ್ರಾ ಜಲಾಶಯದಲ್ಲಿ ಹೂಳಿನ ಬಗ್ಗೆ ಮಾತನಾಡದೇ ಭಾವನಾತ್ಮಕ ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ ಎಂದು ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ಆಂಧ್ರಪ್ರದೇಶ ರಾಜ್ಯ ಕಾಂಗ್ರೆಸ್ ಸಮಿತಿಯ ಮಾಜಿ ಅಧ್ಯಕ್ಷ ಸಾಕೆ ಶೈಲಜಾನಾಥ್, ಮಹಾರಾಷ್ಟ್ರದ ಮಾಜಿ ಸಚಿವ ವಸಂತ್ ರಾವ್ ಪೂರ್ಕೇ, ಬಳ್ಳಾರಿ ನಗರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಜಿ.ಎಸ್.ಮಹಮ್ಮದ್ ರಫೀಕ್, ಬಳ್ಳಾರಿ ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಬಿ.ವಿ.ಶಿವಯೋಗಿ, ಬಳ್ಳಾರಿ ಗ್ರಾಮಾಂತರ -93 ವಿಧಾನಸಭಾ ಕ್ಷೇತ್ರದ ವೀಕ್ಷಕರು ಹಾಗೂ ಗುಂಟೂರಿನ ಮಾಜಿ ಶಾಸಕ ಶೈಕ್ ಮಸ್ತಾನ್ ವಲಿ, ತಮಿಳುನಾಡು ರಾಜ್ಯ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷರಾದ ಶೈಕ್ ಅಸ್ಲಾಂ ಭಾಷಾ, ಕೆಪಿಸಿಸಿ ಪ್ರಚಾರ ಸಮಿತಿಯ ರಾಜ್ಯ ಜಂಟಿ ಸಂಯೋಜಕರಾದ ವೆಂಕಟೇಶ್ ಹೆಗಡೆ, ಕೆಪಿಸಿಸಿ ಸದಸ್ಯ ಕಲ್ಲುಕಂಭ ಪಂಪಾಪತಿ, ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಕಾಂತಿ ನೋಹ ವಿಲ್ಸನ್, ಐ.ಎನ್.ಟಿ.ಯು.ಸಿ ವಿಭಾಗದ ಅಧ್ಯಕ್ಷ ಕೆ.ತಾಯಪ್ಪ, ಕಾಂಗ್ರೆಸ್ ಮುಖಂಡ ಕಂದಾರಿ ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.
*****