ಗಜಲ್
ಭಾವಗಳ ಕಡಲ ಅಲೆಗಳು ಹುಚ್ಚೆದ್ದಿವೆ ಇಂದವನು ಬರುವನೋ ಏನೋ
ಕನಸುಗಳು ಕಂಗಳಲಿ ನಲಿಯುತ್ತಿವೆ ಇಂದವನು ಬರುವನೋ ಏನೋ
ಒಡಲ ವಿರಹದ ಚಡಪಡಿಕೆಗೆ ಉರಿವ ದಿನಪನಿಗೂ ಒಳಗೊಳಗೇ ನಗು
ಇರುಳು ಮುಸುಕು ಹಾಸಲು ಕಾದಿರುವೆ ಇಂದವನು ಬರುವನೋ ಏನೋ
ನೆಟ್ಟ ನೋಟದೊಳಗೆ ಹಾರಾಡುತ್ತಿವೆ ವಿರಹದ ನೂರು ಪತಂಗಗಳು
ಆತ್ಮದ ಕಾಲಿಗೂ ಗೆಜ್ಜೆ ಕಟ್ಟಿರುವೆ ಇಂದವನು ಬರುವನೋ ಏನೋ
ಹಸಿರು ಮರದ ಕೊಂಬೆ ಕೊಂಬೆಗಳಲ್ಲೂ ಹೊಸ ಉನ್ಮತ್ತೆಯ ಮರ್ಮರ
ಹಕ್ಕಿಗಳ ಗುಂಪು ಇಂಪಾಗಿ ಹಾಡುತ್ತಿವೆ ಇಂದವನು ಬರುವನೋ ಏನೋ
ಸಂಜೆಗೆಂಪೆಲ್ಲವೂ ಕದಪುಗಳಲ್ಲಿ ನವಿರಾದ ನಾಚಿಕೆಯ ರಂಗು ಚೆಲ್ಲಿವೆ
ಶ್ರೀಯ ಪ್ರೇಮದಲೆಗಳು ಮೈಮರೆತು ನರ್ತಿಸುತಿವೆ ಇಂದವನು ಬರುವನೋ ಏನೋ
-ಶ್ರೀ.. (ಶ್ರೀಲಕ್ಷ್ಮಿ, ಅದ್ಯಪಾಡಿ, ಮಂಗಳೂರು)
*****