ಅನುದಿನ ಕವನ-೮೬೦, ಕವಿಯಿತ್ರಿ: ಡಾ. ನಾಗರತ್ನ ಅಶೋಕ ಬಾವಿಕಟ್ಟಿ, ಹುನಗುಂದ, ಕಾವ್ಯ ಪ್ರಕಾರ: ಗಜಲ್

ಗಜ಼ಲ್

ಕಾಮಿತ ಫಲವ ಕಾಪಿಟ್ಟು ಪಡೆದಿಹೆನು
ಮರೆಯದ ಒಲುಮೆ ನೀಡುವೆಯಾ
ಗಂಧರ್ವ ಲೋಕದ ದೇವ ಕನ್ಯೆಗೆ
ಪ್ರೇಮದ ಚಿಲುಮೆ ಚಿಮ್ಮುವೆಯಾ

ಮುತ್ತಿನ ಮಾತಿನಲಿ ಹತ್ತಿರ ಸುಳಿಯುತಲಿ
ಸಕ್ಕರೆಯ ಸವಿಯ ತಿನಿಸಿದೆಯಲ್ಲ
ಕುಶಲವ ಕೇಳುತಲಿ ಹೆಸರ ಹೇಳೆಂದು
ಸರಸದಿ ಜುಲುಮೆ ಮಾಡುವೆಯಾ

ಲಜ್ಜೆಯ ಬದಿಸರಿಸಿ ಗೆಜ್ಜೆಯಾ ಗಲುಹಿನಲಿ
ಕಿಂಕಿಣಿಯ ಇಂಚರವ ಕೇಳುತಲಿ
ಬಳಿಬಂದು ಕುಳಿತು ಹೂಮನವ ಕಾಯುತಲಿ
ಮರೆಯದ ನಲುಮೆ ತೋರುವೆಯಾ

ಎದೆಗೂಡ ಸಾಲಿನಲಿ ಕಳೆಯ ಕೀಳುತಲಿ
ನೀರಾಯಿಸಿ ಹದವಾದ ಮಡಿಮಾಡಿ
ಒಳ್ಳೆಯ ಇಳುವರಿಯ ಬೀಜವಾ ಬಿತ್ತುತ
ಒಲವಿಂದ ಉಳುಮೆ ಮಾಡುವೆಯಾ

ಮಗುವಂತ ಹೃದಯದಿ ನಗು ಮೂಡಿಸಿ
ರತುನದಾ ಹೊಳಪ ಹೆಚ್ಚಿಸಲು
ವಸಗೆಯಲಿ ಒಪ್ಪ ಮಾಡಿ ಹಸನಾದ
ಪ್ರೇಮದಾ ಕುಲುಮೆ ಹೊತ್ತಿಸುವೆಯಾ

-ಡಾ. ನಾಗರತ್ನ ಅಶೋಕ ಭಾವಿಕಟ್ಟಿ, ಹುನಗುಂದ
*****