ಅನುದಿನ ಕವನ-೮೬೮, ಕವಿ: ಎ.ಎನ್.ರಮೇಶ್. ಗುಬ್ಬಿ, ಕಾರವಾರ, ಕವನದ ಶೀರ್ಷಿಕೆ:ವಿಭ್ರಾಂತ ನಾವಿಕರು.!

“ಇದು ಬದುಕಿನ ತಲ್ಲಣಗಳ ಅನಾವರಣದ ಕವಿತೆ. ಬಾಳ ನಾವೆಯ ಹೊಯ್ದಾಟಗಳ ರಿಂಗಣಗಳ ಭಾವಗೀತೆ. ಇಲ್ಲಿ ಆಳಕ್ಕಿಳಿದಷ್ಟೂ ಅರಿವು ಅರ್ಥಗಳ ವಿಸ್ತಾರವಿದೆ. ಅರ್ಥೈಸಿದಷ್ಟೂ ಜೀವ-ಜೀವನಗಳ ಭಾವಸಂವೇದನೆಗಳ ಹರಿವಿದೆ. ಓದಿ ನೋಡಿ ಖಂಡಿತಾ ಇಷ್ಟವಾಗುತ್ತದೆ. ಏಕೆಂದರೆ ಇದು ನಮ್ಮ ನಿಮ್ಮದೇ ಬದುಕಿನ ನಿತ್ಯ ಸತ್ಯಗಳ ಚಿರ ಚಿರಂತನ ಭಾವಗೀತೆ ಎನ್ನುತ್ತಾರೆ ಕವಿ ಎ.ಎನ್.ರಮೇಶ್. ಗುಬ್ಬಿ ಅವರು!👇

ವಿಭ್ರಾಂತ ನಾವಿಕರು.!

ಬದುಕುತ್ತೇವೆ ಭರವಸೆಗಳಿಲ್ಲದೆ
ನಿನ್ನೆಯಾ ನೆನಪುಗಳ ಮೇಲೆ.!
ಸ್ಮರಣೆ ಚಿಮಣಿದೀಪ ಹಿಡಿದು
ನಡೆಯುತ್ತೇವೆ ಬೆಳಕೇ ಕಾಣದ
ನಾಳೆಗಳ ದಿಕ್ಕಿನೆಡೆಗೆ ಒಮ್ಮೆಲೆ.!

ನರಳುತ್ತೇವೆ ನಂಬಿಕೆಗಳಿಲ್ಲದೆ
ಸುಡುವ ಯಾತನೆಗಳೊಳಗೆ
ವಿಧಿ ವೈಪರೀತ್ಯಗಳ ನೆನೆದು
ಕೈಚೆಲ್ಲುತ್ತೇವೆ ದಾರಿ ತೋಚದೆ
ಒಡಲೊಳಗೆ ತಲ್ಲಣಗಳ ಜ್ವಾಲೆ.!

ಕೊರಗುತ್ತೇವೆ ಆಸರೆಗಳಿಲ್ಲದೆ
ಸೆಳೆವ ದುಃಖ ಪ್ರವಾಹದೊಳಗೆ
ಬವಣೆ ಬೇಗೆಗಳಿಗೆ ಮಣಿದು
ಕಂಗಾಲಾಗುತ್ತೇವೆ ಕಾಡುವ
ಕತ್ತಲೆಯ ಕಾರ್ಕೋಟಕ ಲೀಲೆ.!

ತೊಳಲುತ್ತೇವೆ ನೆಮ್ಮದಿಯಿಲ್ಲದೆ
ನಶ್ವರ ಬಾಳ ನಿರೀಕ್ಷೆಗಳೊಳಗೆ
ಅನಿಶ್ಚತೆ ಅನಿರೀಕ್ಷತೆಗೆ ತಪಿಸಿ
ಬಳಲುತ್ತೇವೆ ಅಭದ್ರತೆಗಳಲಿ
ನಿತ್ಯ ಅನೂಹ್ಯಗಳ ಸರಮಾಲೆ.!

ಕೊರಡಾಗುತ್ತೇವೆ ಕನಸುಗಳಿಲ್ಲದೆ
ಬಡಿವ ಬಾಳ ಹೊಡೆತಗಳಿಗೆ
ಅಶಾಶ್ವತ ಅತಂತ್ರ ಬದುಕಿನ
ಅಗೋಚರ ಗುರಿ ಗಮ್ಯಗಳೆದುರು
ನಿತ್ಯ ಹೊಯ್ದಾಟಗಳ ಶೃಂಖಲೆ.!

-ಎ.ಎನ್.ರಮೇಶ್. ಗುಬ್ಬಿ. ಕಾರವಾರ