ಪದ್ಯ ಬರೆಯುವುದು ಎಷ್ಟು ಕಷ್ಟ
ಕುಡಿದು ಕಕ್ಕಿದ ಗಂಡನ ಕೋಣೆ
ಸೊಳ್ಳೆ ಕಾರಖಾನೆ
ಸತ್ತು ಸುಮ್ಮನೆ ನಿಂತ ಗಾಳಿ ಬೇನೆ
ಅಪ್ಪಿಕೊಂಡರೆ ರೋಮ ಸೂಜಿ ಮೊನೆ
ಉರಿ ಬೇಸಿಗೆ ಯಮ ಯಾತನೆ
ದೂರದಲ್ಲೆಲ್ಲೊ ಜೋಗಿ ಹಾಡುತ್ತಾನೆ
ಹಳ್ಳ ಹರಿಯುತ್ತಿದೆ
ಹೊಂಗೆ ಹೂ ಬಿಟ್ಟಿದೆ
ಆಹಾ! ಹೊಳೆದಂಡೆಯ ಮರಳೆಷ್ಟು ಚೆಂದ
ನವಿಲು ಗರಿ ಹಾಸಿ ಮಲಗೆನ್ನುತ್ತಿದೆ
ನೀರ ಪಕ್ಕ ಮನೆ ಕಟ್ಟಿದ ಕಾಳಿಂಗ
ಎಷ್ಟು ಅದೃಷ್ಟವಂತ!
ಧಗೆ ಹೆಚ್ಚುತ್ತದೆ ಹೆಣ್ಣಿಗೆ
ಸೆರೆಮನೆಯ ಪಾಳು ಬಾವಿಗೆ ಬಿದ್ದ ಅಮೃತಮತಿ ತಾನೆ?
ಕೊರಳ ಸುತ್ತ ನೇಣಿನ ಕುಣಿಕೆ
ಆದರೇನಂತೆ
ಹಾರು ಹಾರುತ್ತಲೆ ಕೂಡಿ ಕೊಲೆಯಾಗುವ ದುಂಬಿಯಂತಲ್ಲವೆ ಬದುಕು ಮತ್ತು ಪದ್ಯ?
-ಡಾ.ವೆಂಕಟೇಶ ನೆಲ್ಲುಕುಂಟೆ, ಬೆಂಗಳೂರು
*****