ಬೆಂಗಳೂರು, ಮೇ ೨೨ : ಮುಖ್ಯಮಂತ್ರಿಯವರ ಸಚಿವಾಲಯಕ್ಕೆ ಅಧಿಕಾರಿಗಳನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಪ್ರತ್ಯೇಕ ಆದೇಶಗಳನ್ನು ಹೊರಡಿಸಿದೆ.
ಸಿದ್ದರಾಮಯ್ಯ ಅವರು ತಮ್ಮ ಮೊದಲ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮುಖ್ಯಮಂತ್ರಿಯವರ ಮಾಧ್ಯಮ ಸಮನ್ವಕಾರಿಯಾಗಿದ್ದ ಹಿರಿಯ ಪತ್ರಕರ್ತ ಕೆ ವಿ ಪ್ರಭಾಕರ್ ಅವರನ್ನು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರನ್ನಾಗಿ ನೇಮಕ ಮಾಡಲಾಗಿದೆ.
ಅಲ್ಲದೆ, ಕೆ ವಿ ಪ್ರಭಾಕರ್ ಅವರಿಗೆ ಸಂಪುಟ ದರ್ಜೆ ಸಚಿವರ ಸ್ಥಾನಮಾನವನ್ನೂ ಕೂಡಾ ನೀಡಲಾಗಿದೆ.
ರಾಜ್ಯ ಸರ್ಕಾರದ ಗೃಹ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ ರಜನೀಶ್ ಗೋಯಲ್ ಅವರನ್ನು ಮುಖ್ಯಮಂತ್ರಿಯವರ ಆಪರ ಮುಖ್ಯ ಕಾರ್ಯದರ್ಶಿ ಹುದ್ದೆಗೆ ಸಮವರ್ತಿ ಪ್ರಭಾರದಲ್ಲಿರಿಸಿ ನೇಮಕ ಮಾಡಲಾಗಿದೆ.
ಪೌರಾಡಳಿತ ಇಲಾಖೆಯ ಜಂಟಿ ನಿರ್ದೇಶಕ ಬಿ ಶಿವಸ್ವಾಮಿ ಅವರನ್ನು ಮುಖ್ಯಮಂತ್ರಿಯವರ ಜಂಟಿ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.
ಸಿದ್ದರಾಮಯ್ಯ ಅವರು ಪ್ರತಿಪಕ್ಷ ನಾಯಕರಾಗಿದ್ದ ಸಂದರ್ಭದಲ್ಲಿ ಆಪ್ತ ಕಾರ್ಯದರ್ಶಿಯಾಗಿದ್ದ ಕರ್ನಾಟಕ ಆಡಳಿತ ಸೇವೆಯ ಆಯ್ಕೆ ಶ್ರೇಣಿ ಅಧಿಕಾರಿ ಡಾ. ವೆಂಕಟೇಶಯ್ಯ ಅವರನ್ನು ಮುಖ್ಯಮಂತ್ರಿಯವರ ಆಪ್ತ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಮೊದಲ ಅವಧಿಯ ಸಂದರ್ಭದಲ್ಲಿ ವಿಶೇಷಾಧಿಕಾರಿಯಾಗಿದ್ದ ಎಂ. ವೆಂಕಟೇಶ್ ಅವರನ್ನು ಮುಖ್ಯಮಂತ್ರಿಯವರ ಪದಾವಧಿಯವರೆಗೆ ಅಥವಾ ಮುಂದಿನ ಆದೇಶದವರೆಗೆ ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಮುಖ್ಯಮಂತ್ರಿಯವರ ವಿಶೇಷಾಧಿಕಾರಿಯಾಗಿ ಗುತ್ತಿಗೆ ಆಧಾರದ ಮೇರೆಗೆ ನೇಮಕ ಮಾಡಲಾಗಿದೆ.
*****