ಅನುದಿನ ಕವನ-೮೭೭, ಕವಿಯಿತ್ರಿ: ರಮ್ಯ ಕೆ ಜಿ ಮೂರ್ನಾಡು, ಮಡಿಕೇರಿ, ಕವನದ ಶೀರ್ಷಿಕೆ: ಬೆಳಕೆಂದರೆ       

ಕವಿಯಿತ್ರಿ ಪರಿಚಯ: ಕೊಡಗಿನ ಮಡಿಕೇರಿ ತಾಲ್ಲೂಕಿನ ಮೂರ್ನಾಡು ಪುಟ್ಟ ಗ್ರಾಮದ ರಮ್ಯ ಕೆ‌ಜಿ ಅವರು ವೃತ್ತಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕಿ. ಓದು, ಬರೆಹ ಇವರ ನೆಚ್ಚಿನ ಹವ್ಯಾಸ.  “ದಾಹಗಳ ಮೈ ಸವರುತ್ತಾ” ಇವರ ಪ್ರಕಟಿತ ಕವನ ಸಂಕಲನ.

                                                                       ಇಂದಿನ ‘ಅನುದಿನ ಕವನ’ ರಮ್ಯ ಅವರ  ‘ಬೆಳಕೆಂದರೆ’  ಕವಿತೆ! 🍀👇

ಬೆಳಕೆಂದರೆ….

ಅಚಾನಕ್ಕು ಭೇಟಿಗೆ ಸಿಕ್ಕವನು
‘ಹೇಗಿದ್ದೀ?’ ಎಂದು ಕೇಳುವಾಗ
ಅವನೆದೆಗೆ ಬಿದ್ದು ಸಾವರಿಸಿಕೊಳ್ಳುವ
ಆಸೆ ಹಕ್ಕಿಯ ರೆಕ್ಕೆ ಕತ್ತರಿಸಿಕೊಂಡೆ
ಖುಷಿಯ ಕತೆಗಳ ಹೇಳತೊಡಗಿದೆ

ಎದೆ ಬೇನೆ ಕಣ್ಣಲಿ ಉಕ್ಕುವಾಗ
ಎತ್ತಲೋ ಹೊರಡುತ್ತಿದ್ದವನೊಳಗೆ
ಕಳವಳ…!
‘ಕಣ್ಣ ಕೆಳಗೆ ಯಾಕೀ ವರ್ತುಲ?’
ಮತ್ತೆ ಕೇಳಿದ…
ಸುಳಿಯೊಳಗಿನ ಬದುಕಿಗೆ ಒಗ್ಗಿಕೊಂಡ
ನನಗೆ ಉತ್ತರಿಸಬೇಕೆನಿಸಲಿಲ್ಲ…

ಅವನೇ ಯಾಕೆ ಬೆಳಕಾಗಬೇಕು?
ನನ್ನ ಕಣ್ಣ ಹೊಳಪಿಗೆ
ಎಷ್ಟೊಂದು ಕಣ್ಗಳು ಕಾಯುತ್ತಿವೆ…!
ಹೌದು ಬೆಳಕೆಂದರೆ ನಾನೇ ಅಲ್ಲವೇ?

-ರಮ್ಯ ಕೆ ಜಿ ಮೂರ್ನಾಡು, ಮಡಿಕೇರಿ                             —–