ಅನುದಿನ ಕವನ-೮೭೮, ಕವಿ: ಕವಿರಾಜ್, ಬೆಂಗಳೂರು

ಅವಳು ಆಗಷ್ಟೇ
ಸ್ನಾನ ಮುಗಿಸಿ ಬಂದು
ಹನಿ ಒಸರುವ ಹೆರಳುಗಳನ್ನು
ಎಳೆಬಿಸಿಲಿಗೆ
ಒಡ್ಡುತ್ತಾಳೆ

ಆಗಾಗ ಅಂಗೈ ತೂರಿಸಿ
ಅದೇನೋ ಲಾಲಿತ್ಯದಲ್ಲಿ
ಹೆರಳ ರಾಶಿಯನ್ನ
ಅಲೆಅಲೆಯಾಗಿ
ಜಾಡಿಸುತ್ತಾಳೆ
ಚಿಮ್ಮಿದ ಹನಿಗಳಲ್ಲಿ
ಸಾವಿರ ಕಾಮನಬಿಲ್ಲು

ಅದೇ ನೆಪದಲ್ಲಿ
ಎದುರು ಮನೆಯ
ಮಹಡಿಯತ್ತ ಒಂದು
ಓರೆನೋಟ
ಅಲ್ಲಿ ಮೂಲೆಯಲ್ಲಿ
ಯಾವಾಗಲೂ
ಹಗಲಲ್ಲೂ
ನಕ್ಷತ್ರ ಎಣಿಸುವ
ನಾಟಕವಾಡುತ್ತ ನಿಂತಿರುತ್ತಿದ್ದ
ಹುಡುಗ ಈಗಿಲ್ಲ

ಅವಳು ನಿಡುಸುಯ್ದಳೋ ಇಲ್ಲವೋ
ಗೊತ್ತಿಲ್ಲ
ಇಲ್ಲ್ಯಾಕೋ ಇವನಿಗೆ
ನಡು ರಸ್ತೆಯ
ಟ್ರಾಫಿಕ್ ಜ್ಯಾಮಿನಲ್ಲು
ಒಂದೇ ಸಮನೆ
ನಿಲ್ಲದ ಬಿಕ್ಕಳಿಕೆ

– ಕವಿರಾಜ್, ಬೆಂಗಳೂರು
*****