ಅನುದಿನ‌ ಕವನ-೮೮೦, ಹಿರಿಯ ಕವಿ:ಚಂದ್ರಶೇಖರ ನಂಗಲಿ, ಹೊಸಕೋಟೆ, ಕವನದ ಶೀರ್ಷಿಕೆ: ಎರಡು ಕೊಂಬುಗಳು

ಎರಡು ಕೊಂಬುಗಳು

ಮಾಂಸದ ಕಣ್ಣುಗಳಿದ್ದರೆ ಸಾಲದು !
ಹೃದಯವಂತಿಕೆಯ ಕಣ್ಣುಗಳಿರಬೇಕು !

ಮೃದ್ವಸ್ಥಿಯ ಕಿವಿಗಳಿದ್ದರೆ ಸಾಲದು !
ಸಹಸ್ಪಂದನದ ಕಿವಿಗಳಿರಬೇಕು !

ಮಾತಿಗೆ ಮಾತು ಕುಟ್ಟುವ ಬಾಯಿದ್ದರೆ ಸಾಲದು !
ಮೌನದ ಬೆಲೆ ಏನೆಂದು ಗೊತ್ತಿರಬೇಕು !

ಭಾಷೆಯ ವಾಗ್ ವಿಲಾಸವಿದ್ದರೆ ಸಾಲದು !
ಹೃದಯ ಸಂವಾದದ ಕಲೆ ಗೊತ್ತಿರಬೇಕು !

ಎಲ್ಲವನ್ನೂ ಪರಿಶೀಲಿಸುವ ಮನಸ್ಸಿದ್ದರೆ ಸಾಲದು !
ಮನಸ್ಸು ಸದಾ ಮಂಟಪವಾಗಿರಬೇಕು !

ಎಲ್ಲಕ್ಕಿಂತ ಮುಖ್ಯವಾಗಿ ಎರಡು ಕೊಂಬುಗಳಾದ
ಅಹಂಕಾರ ಮಮಕಾರ ಇರಬಾರದು !

ಅಭಿಮನ್ಯುವಿನ ಕಳೇಬರ ಕಂಡು ಶತ್ರುವೆಂದು
ಬಗೆಯದೆ, ಮನಸಾರೆ ಮೆಚ್ಚಿದ ಸುಯೋಧನನ
ನಿರ್ಮತ್ಸರ ಗುಣ ನಮ್ಮಲ್ಲಿರಬೇಕು !


– ವಿ.ಚಂದ್ರಶೇಖರ ನಂಗಲಿ, ಹೊಸಕೋಟೆ
*****