ಅನುದಿನ ಕವನ-೮೮೧, ಕವಿ: ದುಡ್ಡನಹಳ್ಳಿ ಮಂಜುನಾಥ್, ತುಮಕೂರು

ಸಾಕು
ಈಗಷ್ಟೇ ಆಡಿ ಬಂದಂತಿದೆ
ಹೊಂಗೆಬಯಲಿನಲ್ಲಿ
ಕಣ್ಣಾಮುಚ್ಚೆ ಕಾಡೇಗೂಡೆ
ಪದ ಹೇಳುತ್ತಿದ್ದ ಅಜ್ಜಿ
ಕಾಡು ಸೇರಿದ್ದಾಳೆ

ಇನ್ನೂ ಮುಗಿದಿಲ್ಲ ರತ್ತೋರತ್ತೋ ಹಾಡು
ಕೈಕೈ ಹಿಡಿದು ಸುತ್ತುತ್ತಿದ್ದ ಗೆಳತಿ
ಮೂಲೆ ಸೇರಿದ್ದಾಳೆ

ಪೂರಾ ಜೋಡಿಸೇ ಇಲ್ಲ
ಲಗೋರಿ ಕಲ್ಲುಗಳ
ಜೊತೆಗಾರರೆಲ್ಲ
ಓಡಿದ್ದಾರೆ ದೂರ ದೂರ

ಇನ್ನೂ ತಂದಿಲ್ಲ ಬಾಳೆಹಣ್ಣು
ಸಂತೆಯಿಂದ
ಆಗಲೇ ಸೋತಿವೆ
ಅವಲಕ್ಕಿ ಪವಲಕ್ಕಿ ಆಡಿದ ಕೈಗಳು

ಯೌವನಕ್ಕೆ ಮುಗಿದರೆ ಬಾಲ್ಯದ ನಗು
ಇದ್ದು ಮಾಡುವುದೇನು
ಮುಪ್ಪಿನಾವರೆಗೂ


-ದುಡ್ಡನಹಳ್ಳಿ ಮಂಜುನಾಥ್
*****