ಉಚಿತ ಕೊಡುಗೆಗಳ ಆರ್ಥಿಕತೆ
-ಅರವಿಂದ ಚೊಕ್ಕಾಡಿ, ಚಿಂತಕರು
ಉಚಿತ ಕೊಡುಗೆಗಳಿಗೆ ಸರಕಾರಕ್ಕೆ 50 ಸಾವಿರ ಕೋಟಿ ಬೇಕು ಎಂದರೆ ಅದರ ಅರ್ಥ ಸರಕಾರ 50 ಸಾವಿರ ಕೋಟಿ ರೂಪಾಯಿಯನ್ನು ಜನರ ಮೇಲೆ ಹೂಡಿಕೆ ಮಾಡುತ್ತಿದೆ ಎಂದು. ಇಲ್ಲಿ ಸರಕಾರಕ್ಕೆ ನಷ್ಟ ಆಗುವ ಪರಿಕಲ್ಪನೆ ಬರುವುದಿಲ್ಲ. ಏಕೆಂದರೆ ಲಾಭ ಮಾಡಲಿಕ್ಕೆ, ಸರಕಾರ ವ್ಯಾಪಾರಿಯಲ್ಲ; ಯಜಮಾನ. ನನ್ನ ಮಗಳಿಗೆ 50 ಸಾವಿರ ರೂಪಾಯಿ ಕಾಲೇಜು ಶುಲ್ಕ ನಾನು ಕಟ್ಟಿದರೆ ನನಗೆ 50 ಸಾವಿರ ರೂಪಾಯಿ ನಷ್ಟವಾಯಿತೆಂದು ಅರ್ಥವಲ್ಲ. ಮಗಳ ಸಬಲೀಕರಣವಾದಾಗ ಅದು ನನ್ನ ಸಬಲೀಕರಣವೂ ಆಗುತ್ತದೆ. ಅದೇ ರೀತಿ ಜನರ ಸಬಲೀಕರಣವಾದಾಗ ತಾನೇ ತಾನಾಗಿ ಸರಕಾರದ ಸಬಲೀಕರಣವೂ ಆಗುತ್ತದೆ. ಏಕೆಂದರೆ ಸರಕಾರ ಜನರ ಮೇಲೆ ಮಾಡಲಿರುವ 50 ಸಾವಿರ ಕೋಟಿ ರೂಪಾಯಿಗಳು ಇದೇ ಇಕಾನಮಿಯಲ್ಲಿ ಚಲಿಸುತ್ತಿರುತ್ತದೆ. ಜನರ ಖರೀದಿಯ ಸಾಮರ್ಥ್ಯ ಜಾಸ್ತಿಯಾದಾಗ ಅವರು ಖರೀದಿಸುವ ವಸ್ತುಗಳಿಗೆ ಹಾಕಲಾಗುವ ತೆರಿಗೆ ಸರಕಾರಕ್ಕೇ ಹೋಗುತ್ತದೆ.
ಕೇಂದ್ರ ಸರಕಾರದ ಮುದ್ರಾ ಯೋಜನೆಯ ಬಗ್ಗೆ ಬರೆದ ನಂತರ ಯಾವುದೇ ಅರ್ಥಶಾಸ್ತ್ರೀಯ ಲೇಖನಗಳನ್ನು ನಾನು ಬರೆದಿಲ್ಲ. ನನ್ನ ತಂದೆಯ ಕಾಲದಲ್ಲಿ ಸಮಾಜವಾದಿ ಸಮಾಜ ಒಂದು ಆದರ್ಶವಾಗಿತ್ತು. ಆ ಆದರ್ಶ ನನ್ನ ತಾರುಣ್ಯದ ದಿನಗಳಿಗೆ ಮಾತ್ರ ಸೀಮಿತವಾಗಿತ್ತು. ಬಡತನದ ಹಿನ್ನೆಲೆಯಿಂದ ಬಂದವನಾದ್ದರಿಂದ ಸಹಜವಾಗಿಯೆ ಸಮಾಜವಾದಿ ಆರ್ಥಿಕತೆ ನನ್ನನ್ನು ಸೆಳೆಯುತ್ತದೆ. ಸಮಾಜವಾದ ಎಂದರೆ 50 ಸಾವಿರ ಕೋಟಿ ರೂಪಾಯಿ ಆಸ್ತಿ ಇರುವವನನ್ನು ಅವನ ಜಾತಿಯ ಕಾರಣಕ್ಕಾಗಿ ಶೋಷಿತ ಎನ್ನುವ ಜಾತಿವಾದಿಗಳ ಸಮಾಜವಾದವನ್ನು ನಾನು ಹೇಳುತ್ತಿರುವುದಲ್ಲ. ಜಾತಿಯ ಕಾರಣಕ್ಕಾಗಿ ಸಾಮಾಜಿಕ ಅವಮಾನವನ್ನು ಅನುಭವಿಸುತ್ತಾ ಸಂಪತ್ತನ್ನು ಸೃಷ್ಟಿಸಿಕೊಳ್ಳುವ ಅವಕಾಶ ಇಲ್ಲದವನನ್ನು ಶೋಷಿತ ಎಂದು ನಾನು ಕರೆಯುವುದು. ಅದು ಲಿಂಗ, ಧರ್ಮ, ಪ್ರದೇಶ, ಬಡತನ ಹೀಗೆ ಎಲ್ಲ ಆಧಾರಗಳಿಗೂ ವಿಸ್ತರಿಸುವ ಸಮಾಜ ವಾದ. ಬಂಡವಾಳವಾದಿ ಅರ್ಥಶಾಸ್ತ್ರಜ್ಞನೂ ಕೂಡ ಬಂಡವಾಳವಾದಿ ವಿಧಾನದಲ್ಲಿ ಸಮಾಜವಾದಿ ಆಶಯಗಳು ಹೇಗೆ ಈಡೇರುತ್ತವೆ ಎಂದೇ ಹೇಳಬೇಕಾಗುತ್ತದೆ. ಏಕೆಂದರೆ ಅರ್ಥಶಾಸ್ತ್ರ ಎಂಬ ಸಬ್ಜೆಕ್ಟೇ socialistic in nature. ಆದ್ದರಿಂದಲೇ ಇಡೀ ಜಗತ್ತು ಮುಕ್ತ ಆರ್ಥಿಕತೆಯನ್ನು ಹೊಂದಿರಬೇಕು ಎನ್ನುವ ಬಂಡವಾಳವಾದಿ ಅರ್ಥಶಾಸ್ತ್ರಜ್ಞ ಆ್ಯಡಂ ಸ್ಮಿತ್ ಕೂಡ ನ್ಯಾಯದ ಆಡಳಿತವನ್ನು ಸರಕಾರವೇ ಮಾಡಬೇಕು ಎನ್ನುತ್ತಾರೆ. ಅರ್ಥಶಾಸ್ತ್ರದಲ್ಲಿ ನ್ಯಾಯ ಎಂದಾಗ ಅದು ಕ್ರಿಮಿನಲ್ ಅಪರಾಧಕ್ಕೆ ಸೀಮಿತ ಅಲ್ಲ; ಸಾಮಾಜಿಕ ನ್ಯಾಯಕ್ಕೆ ಸಂಬಂಧಿಸಿರುತ್ತದೆ.
ಆಧುನಿಕ ಆರ್ಥಿಕತೆಯಲ್ಲಿ ಶ್ರಮದ ಚಲನೆಗೆ ಬಹಳ ಮಹತ್ವವಿದೆ. ನಮ್ಮ ಆರ್ಥಿಕತೆಯಲ್ಲಿ ಮಹಿಳೆಯರ ಪಾಲುದಾರಿಕೆ ಸುಮಾರು 20-25% ನಷ್ಟು ಇರುವುದು. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಎನ್ನುವುದು ದುಡಿಯುವ ಮಹಿಳೆಯರಿಗೆ ಸಪೋರ್ಟಿವ್ ಆಗಿ ಕೆಲಸ ಮಾಡುತ್ತದೆ. ತೀರಾ ಕಡಿಮೆ ವೇತನದ ಮಹಿಳೆಯರಿಗೆ ಉದ್ಯೋಗ ಬಿಡದಂತೆ ಸಣ್ಣ ಉತ್ತೇಜಕವಾಗಿ ಕೆಲಸ ಮಾಡುತ್ತದೆ. ಉದಾಹರಣೆಗೆ 2-3 ಸಾವಿರ ವೇತನಕ್ಕೆ ಸೇಲ್ಸ್ ಗರ್ಲ್ ರೀತಿಯ ಕೆಲಸ ಮಾಡುವ ಯುವತಿಯರನ್ನು ಗಮನಿಸಿ. ಮನೆಯಿಂದ ಉದ್ಯೋಗದ ಸ್ಥಳಕ್ಕೆ ಹೋಗಿ ಬರಲು ಸರಾಸರಿ ಅಂದಾಜು ದಿನಕ್ಕೆ 20-25 ರುಪಾಯಿ ಟಿಕೆಟ್ ಚಾರ್ಜು ಬೇಕು. ತಿಂಗಳಿಗೆ 750 ರೂಪಾಯಿ ಬಸ್ ಪ್ರಯಾಣಕ್ಕೆ ಹೋದರೆ 2 ಸಾವಿರ ರೂಪಾಯಿ ವೇತನದವಳಿಗೆ ಈ ಉದ್ಯೋಗವೇ ವೇಸ್ಟ್ ಎಂದು ಅನಿಸುತ್ತದೆ. ನಮ್ಮಲ್ಲಿನ ಅತಿಥಿ ಶಿಕ್ಷಕರಲ್ಲಿ ಬಹುತೇಕರು ಮಹಿಳೆಯರು. 10 ಸಾವಿರ ಸಂಬಳ ಸಿಗುತ್ತದೆ. ಅದರಲ್ಲಿ 750 ಬಸ್ ಚಾರ್ಜ್ ಉಳಿಯಿತು ಎನ್ನುವುದು ಆಕೆಗೆ ಮತ್ತೇನೋ ಆರ್ಥಿಕ ಚಟುವಟಿಕೆ ರೂಪಿಸಲು ಅವಕಾಶ ಮಾಡಿಕೊಡುತ್ತದೆ. ಒಂದು ಸೀರೆ ಖರೀದಿಸುತ್ತಾಳೆ ಎಂದು ಭಾವಿಸಿ. ಸೀರೆಯ ಮೇಲಿನ ಟ್ಯಾಕ್ಸ್ ಸರಕಾರಕ್ಕೇ ಹೋಗುತ್ತದೆ. ಜವುಳಿ ವ್ಯಾಪಾರಿಗೆ 750 ರೂಪಾಯಿ ವ್ಯಾಪಾರ ಆಯಿತು. ಅವನು ಮತ್ತೇನೋ ಆರ್ಥಿಕ ಚಟುವಟಿಕೆಗೆ ಅದನ್ನು ಹೊಂದಿಸುತ್ತಾನೆ. ಅದರ ಮೇಲಿನ ಟ್ಯಾಕ್ಸೂ ಸರಕಾರಕ್ಕೇ ಹೋಗುತ್ತದೆ. ಆ ಆರ್ಥಿಕ ಯೋಜನೆಯವ ಮತ್ತೊಂದು ಆರ್ಥಿಕ ಚಟುವಟಿಕೆ ರೂಪಿಸುತ್ತಾನೆ. ಹೀಗೆ ಆರ್ಥಿಕ ಚಟುವಟಿಕೆಗಳ ಸರಣಿಯನ್ನು 750 ರೂಪಾಯಿ ರೂಪಿಸುತ್ತದೆ. ಇಲ್ಲಿ 750 ರೂಪಾಯಿಯನ್ನು ಉದಾಹರಣೆಯಾಗಿರಿಸಿಕೊಂಡಾಗ ಇದು ಸಣ್ಣ ಮೊತ್ತ ಎನಿಸುತ್ತದೆ. ಅದನ್ನೆ, ಅಂದಾಜು 50 ಲಕ್ಷ ಮಹಿಳೆಯರಿಗೆ ಗುಣಿಸಿದಾಗ ಎಷ್ಟು ರುಪಾಯಿ ಆಯಿತೆಂದು ಯೋಚಿಸಿ. ಅಷ್ಟು ಮೊತ್ತದ ಆರ್ಥಿಕ ಚಟುವಟಿಕೆ ಹೆಚ್ಚಾಗಲೇ ಬೇಕಲ್ಲ. ಒಂದು ವೇಳೆ ಖರೀದಿಯನ್ನೆ ಮಾಡದೆ ಜನ ಬ್ಯಾಂಕ್ ನಲ್ಲಿ ಉಳಿತಾಯ ಮಾಡಿದರೆ ಬ್ಯಾಂಕ್ ಆ ಹಣವನ್ನು ಸಾಲವಾಗಿ ಬೇರೆ ಯಾರಿಗೋ ಕೊಡುತ್ತದೆ. ಮತ್ತೆ ಅದು ಆರ್ಥಿಕ ಚಟುವಟಿಕೆಯನ್ನೆ ಹೆಚ್ಚಿಸುತ್ತದೆ. ಹೀಗೆ 50 ಸಾವಿರ ಕೋಟಿ ರೂಪಾಯಿಗಳು ಒಟ್ಟಾಗಿ ಆರ್ಥಿಕತೆಯಲ್ಲಿ ಚಲನೆಗೆ ಒಳಪಟ್ಟಾಗ ಒಟ್ಟೂ ಆರ್ಥಿಕತೆಗೆ ಸಣ್ಣ ಚೈತನ್ಯ ಬರುತ್ತದೆ.
‘ಮಾಸ್’ ನ ಮೇಲೆ ಪರಿಣಾಮ ಬೀರುವ ಆರ್ಥಿಕ ಪರಿಕಲ್ಪನೆಗಳನ್ನು ಸರಕಾರ ಚಾಲನೆಗೆ ತರುವುದು ಆರ್ಥಿಕೇತರ ಸಾಮಾಜಿಕ ಪರಿಣಾಮಗಳನ್ನೂ ಉಂಟು ಮಾಡುತ್ತದೆ. ಉಚಿತ ಕೊಡುಗೆಗಳ ಬಗ್ಗೆ ಲಕ್ಷಾಂತರ ಜನ ಸಮರ್ಥನೆ ಮತ್ತು ವಿರೋಧ ಎರಡನ್ನೂ ಮಾಡಿದ್ದಾರೆ. ಆದರೆ ಎರಡೂ ತಂಡಗಳೂ ಅಷ್ಟರ ಮಟ್ಟಿಗೆ ಆರ್ಥಿಕತೆಯ ಬಗ್ಗೆಯೇ ಯೋಚಿಸಿದ್ದಾರೆ. ಅಷ್ಟು ಹೊತ್ತು ಜಾತಿ/ ಧರ್ಮದ ಆಧಾರದಲ್ಲಿ ನಿಂದನೆ ಮಾಡುವ ಸಮಯವನ್ನು ಕಳೆದುಕೊಂಡಿದ್ದಾರೆ; ಅಂದರೆ ಅಷ್ಟರ ಮಟ್ಟಿಗೆ ದ್ವೇಷ ಪ್ರಸರಣ ಕಾರ್ಯಕ್ರಮ ಸ್ಟಾಪ್ ಆಗಿದೆ. ಇದು ಸಮಾಜಕ್ಕೆ ಆಗಿರುವ ಲಾಭ. ಮತ್ತು ತಾರ್ಕಿಕವಾಗಿ ಯೋಚಿಸುವ ಶಕ್ತಿಗೆ ಸಿಕ್ಕಿದ ಉತ್ತೇಜನ.
ಇಷ್ಟೆಲ್ಲ ಆದರೂ ಒಂದು ಸಮಸ್ಯೆ ಆಗುತ್ತದೆ. ಸರಕಾರದ ಆದಾಯ ಗಳಿಕೆಗಾಗಿ ಮಧ್ಯಮ ವರ್ಗದ ಮೇಲೆ ತೆರಿಗೆ ಹೆಚ್ಚಿಸಿದರೆ ಸಮಸ್ಯೆಯಾಗುತ್ತದೆ. ಅತಿ ಶ್ರೀಮಂತರ ಮೇಲಿನ ತೆರಿಗೆಯನ್ನು ಬಡವರಿಗೆ ವರ್ಗಾಯಿಸುವುದು ಸಂಪತ್ತಿನ ವಿಕೇಂದ್ರೀಕರಣ ಎನ್ನುವುದು ತಾತ್ವಿಕವಾಗಿ ಸರಿ. ಆದರೆ ವಾಸ್ತವದಲ್ಲಿ ಹಾಗಾಗುವುದಿಲ್ಲ. ಅತೀ ಶ್ರೀಮಂತ ವರ್ಗಕ್ಕೆ ಕಾನೂನನ್ನು ತನಗೆ ಬೇಕಾದ ಹಾಗೆ ಮಾಡಿಸುವ ಮತ್ತು ಕಾನೂನಿನ ಒಳಗೆ ನುಸುಳುವ ಶಕ್ತಿ ಇರುತ್ತದೆ. ಬಡ ವರ್ಗಕ್ಕೆ ತೆರಿಗೆ ಪಾವತಿಯ ಶಕ್ತಿಯೇ ಇರುವುದಿಲ್ಲ. ಆದ್ದರಿಂದ ಅದರ ಮೇಲೆ ತೆರಿಗೆ ಹಾಕಲು ಆಗುವುದಿಲ್ಲ. ಮಧ್ಯಮ ವರ್ಗಕ್ಕೆ ಕಾನೂನನ್ನು ತನಗೆ ಬೇಕಾದಂತೆ ಮಾಡಿಸುವ ಮತ್ತು ಕಾನೂನಿನೊಳಗೆ ನುಸುಳುವ ಶಕ್ತಿ ಇರುವುದಿಲ್ಲ. ಆಗ ಮಧ್ಯಮ ವರ್ಗದಿಂದ ತೆರಿಗೆ ಸಂಗ್ರಹಿಸುವುದು ಸುಲಭವಾಗುತ್ತದೆ. ಮಧ್ಯಮ ವರ್ಗದಿಂದ ಹೀರಿ ಆ ಕಡೆಯಿಂದ ಅತಿ ಶ್ರೀಮಂತರಿಗೂ, ಈ ಕಡೆಯಿಂದ ಬಡವರಿಗೂ ಕೊಡುತ್ತಾ ಹೋದರೆ ಆರ್ಥಿಕತೆ ಬೆಳೆಯುವುದಿಲ್ಲ. ಏಕೆಂದರೆ ಸದಾ ಕಾಲವೂ ಆರ್ಥಿಕತೆಯನ್ನು ಬೆಳೆಯಿಸುವುದು ಮಧ್ಯಮ ವರ್ಗ; ಅದಕ್ಕೆ ಕೊಳ್ಳುವ ಅಪೇಕ್ಷೆ ಜಾಸ್ತಿ ಇರುತ್ತದೆ. ಆದ್ದರಿಂದ ಮಧ್ಯಮ ವರ್ಗದ ಖರೀದಿಸುವ ಶಕ್ತಿ ಕುಗ್ಗದ ಹಾಗೆ ನೋಡಿಕೊಳ್ಳಬೇಕು.
-ಅರವಿಂದ ಚೊಕ್ಕಾಡಿ, ಮೂಡಬಿದ್ರೆ
*****