ಬರುತ್ತಿದ್ದೇನೆಂದಿದ್ದ ಅವನು
ಎಂದಿನ ತುಂಟತನದ ತುಂಬು ನಗೆಯನ್ನು
ಹೊರಚೆಲ್ಲುತ್ತಲೇ…
ಬಹುಶಃ ಎಂದಿನಂತೆ ಸುಳ್ಳಿರಲಾರದು ಅಂದುಕೊಂಡಿದ್ದೆ
ಆಕಾಶವನ್ನೇ ಕಣ್ಣೊಳಗೆ ಒಂದು ಚಾದರದಂತೆ
ಹಾಸಿ ಕಾಯುತ್ತಿದ್ದೆ….
ಕಾದಿರುವ ಸಮಯವೆಲ್ಲ ಈ ಸಲ
ನನ್ನೊಬ್ಬಳದ್ದೇ ಎಂಬಂತೆ.
ನೆಲದ ತುಂಬ ಪಾರಿಜಾತದ ಹೂಗಳು ನಗುತ್ತಿವೆ
ಬಹುಶಃ ಇಂದಾದರೂ ಬಂದಾನು ಎಂದಂತೆ.
ತೆರೆದಿಟ್ಟ ಹಣ್ಣುಗಳ ಎಸಳುಗಳೆಲ್ಲ ಯಾರಿಗಾಗಿಯೋ
ಕಾಯುತ್ತಿರುವಂತೆ ಸಂಭ್ರಮಿಸುತ್ತಿವೆ
ಯಾಕೋ ಉದ್ದವಾದಂತೆನಿಸುತ್ತದೆ ಈ ಹಾದಿ
ಆದರೂ ಪುಳಕಗೊಳ್ಳುತ್ತಿದ್ದೇನೆ ಸುಮ್ಮನೆ
ಸಣ್ಣ ಸಪ್ಪಳವೂ ಅವನ ಕಾಲ ಸದ್ದಿನ
ಹಾಗೆ ಕೇಳಿಸುತ್ತದೆ
ಅಲ್ಲೆಲ್ಲೋ ನಿಂತು ಕರೆದಂತೆ ಹೊರಳಿ ನೋಡುತ್ತೇನೆ
ನೆಲದಲ್ಲಿ ಬಿದ್ದಿರುವ
ಪಾರಿಜಾತಗಳು ಬಿಸಿಲಿಗೆ ಸಿಕ್ಕು ನಲುಗುತ್ತಿವೆ
ಅಪರಿಚಿತ ಹೆಜ್ಜೆಗಳ ಅಡಿಯಲ್ಲಿ
ಸಿಲುಕಿ ಮಾತಿಲ್ಲದೆ ಚೀತ್ಕರಿಸುತ್ತವೆ
ಆಕಾಶದಲ್ಲಿ ಬೆಳ್ಳಿಯ ಮೋಡಗಳು
ಬೆಳ್ಳಗೆ ಹೊಳೆವ ಸೂರ್ಯನ ಜೊತೆಗೆ
ಚಕ್ಕಂದವಾಡುತ್ತಿವೆ
ನಾನು ಅವನ ಮೋಸಗಳ
ಯೋಚಿಸುತ್ತ ಉದ್ವಿಗ್ನಳಾಗುತ್ತಿದ್ದೇನೆ.
ಈ ಮೋಸವ ನೆನೆನೆನೆದು…
ಹೊಕ್ಕಳಬಳ್ಳಿಯಿಂದ ಚೀರಬೇಕೆನಿಸುತ್ತಿದೆ…
ಈ ಉದ್ದನೆಯ ಹಗಲು ಬರಿಯ ನಿಟ್ಟುಸಿರುಗಳಿಗೇ
ಮುಗಿದವಲ್ಲ ಎಂದು ಮಗ್ಗುಲಾಗುತ್ತೇನೆ
ದೂರದಲ್ಲಿ ಮುಳುಗುವ ಸೂರ್ಯನ ಬೆಳಕಲ್ಲಿ
ಅವನು ಬರುತ್ತಿರುವಂತೆ ಮತ್ತೆ ಅನಿಸುತ್ತದೆ
ಈ ಸಲವಾದರೂ ಇವನು ಸುಳ್ಳಾಗದಿರಲಿ
ಕಣ್ಣುಗಳಲ್ಲಿ ಬೆಳಕು ತುಂಬಿಕೊಂಡು ಕಾಯುತ್ತೇನೆ….
ಎಂದೂ ಇಲ್ಲದಂತೆ ತಣ್ಣಗೆ ಗಾಳಿ ಬೀಸುತ್ತಿದೆ…
ಹತ್ತಿಯಂತೆ ಹಗುರಾಗಿ ಮತ್ತೆ ಹೊರಳುತ್ತೇನೆ
ಕಣ್ಣತುಂಬಿಕೊಂಡಂತೆ ಬರಿದಾದ ರಸ್ತೆ
ಉದ್ದವಾಗಿ ಬಿದ್ದುಕೊಂಡಿದೆ…
-ಭಾರತಿ ಹೆಗಡೆ, ಬೆಂಗಳೂರು
*****