ಅಭಿವೃದ್ಧಿಯ ಹರಿಕಾರ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಲೇಖಕರು: ಪ್ರೊ. ಎಂ. ನಾರಾಯಣಸ್ವಾಮಿ ತ್ಯಾವನಹಳ್ಳಿ, ಬೆಂಗಳೂರು

ಅಭಿವೃದ್ಧಿಯ ಹರಿಕಾರ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್

ಮೈಸೂರಿನ ಆಳರಸರ ಪೈಕಿ ಹೆಚ್ಚು ಜನಪರ ಆಡಳಿತ ನಡೆಸಿದವರು ನಾಲ್ವಡಿಯವರು. ನಾಡಿನ ಶ್ರೇಯೋಭಿವೃದ್ಧಿಗಾಗಿ ಜೀವನವನ್ನು ಮುಡಿಪಿಟ್ಟವರು. ಅವರ ಅವಧಿಯಲ್ಲಿ ಅಸಂಖ್ಯಾತ ಅಭಿವೃದ್ಧಿಯ ಕೆಲಸಗಳಾದವು. ದೀನದಲಿತರ, ಹಿಂದುಳಿದವರ ಏಳಿಗೆಗಾಗಿ ಕ್ರಾಂತಿಕಾರಿ ಹೆಜ್ಜೆಗಳನ್ನಿಟ್ಟರು. ರಾಜರ್ಷಿಯವರ ಆಡಳಿತದ ವೈಖರಿಯು ಇಂದಿಗೂ ಆದರಣೀಯ, ಅನುಕರಣೀಯ. ಅದರೆ, ಅವರ ರಾಜ್ಯಾಭಿವೃದ್ಧಿಯ ಕೆಲಸಗಳನ್ನು ಮರೆಮಾಚುವ ಪ್ರಯತ್ನಗಳು ನಿಧಾನವಾಗಿ ನಡೆಯುತ್ತಿವೆ. ಇತ್ತಿಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಅವರ ಅಭಿವೃದ್ದಿ ಕಾರ್ಯಗಳ ಕೆಲವು ಮೈಲುಗಲ್ಲುಗಳನ್ನಷ್ಟೇ ಹಂಚಿಕೊಳ್ಳಲಾಯಿತು. ಅದು ಅಪೂರ್ಣವಾದ ಪಟ್ಟಿ ಎಂದು ಕೆಲವರು ಭಾವಿಸಿದರು. ಎಲ್ಲವನ್ನೂ ಹಂಚಿಕೊಳ್ಳಲು ಹಲವು ಮಿತಿಗಳಿರಬಹುದು. ನಾಲ್ವಡಿ ಮಹಾರಾಜರ ಬದುಕು ಹಾಗೂ ಶಾಶ್ವತವಾದ ಪ್ರಮುಖ ಸಾಧನೆಗಳತ್ತ ಒಂದು ಪಕ್ಷಿನೋಟ.

ನಾಲ್ವಡಿ ಕೃಷ್ಣರಾಜ ಒಡೆಯರ್ (ಜನನ 04.06.1884 – ಮರಣ 03.08.1940) ರವರು ಮೈಸೂರಿನ ರಾಜಮನೆತನದ 24ನೇ ಮಹಾರಾಜರಾಗಿ 08.08.1902 ರಿಂದ 03.08.1940 ರವರೆಗೆ ಒಟ್ಟು 38 ವರ್ಷಗಳ ಕಾಲ ಅಧಿಕಾರ ನಡೆಸಿದರು.

ತಂದೆ ಶ್ರೀ ಚಾಮರಾಜ ಒಡೆಯರ್ ಮತ್ತು ತಾಯಿ ಕೆಂಪನಂಜಮ್ಮಣ್ಣಿ ವಾಣಿವಿಲಾಸ ಸನ್ನಿಧಾನರವರ ಚೊಚ್ಚಲ ಮಗ ನಾಲ್ವಡಿ ಕೃಷ್ಣರಾಜ ಒಡೆಯರ್. ಅವರಿಗೆ ಮೂವರು ಸಹೋದರಿಯರು: ಜಯಲಕ್ಷ್ಮಮ್ಮಣ್ಣಿ, ಚೆಲುವಾಜಮ್ಮಣ್ಣಿ ಮತ್ತು ಕೃಷ್ಣಾಜಮ್ಮಣ್ಣಿ. ತಮ್ಮನವರಾದ ಶ್ರಿ ಕಂಠೀರವ ನರಸಿಂಹರಾಜ ಒಡೆಯರವರು ನಾಲ್ವಡಿಯವರ ಜನಪರ ಆಡಳಿತಕ್ಕೆ ಒತ್ತಾಸೆಯಾಗಿ ನಿಂತರು. ನಾಲ್ವಡಿಯವರಿಗೆ ಉತ್ತಮ ಶಿಕ್ಷಣ ಕೊಡಲು 1892 ರಲ್ಲಿ ‘ರಾಯಲ್ ಸ್ಕೂಲ್’ ಅನ್ನು ಆರಂಭಿಸಲಾಯಿತು. ಜೆ. ಜೆ. ವೈಟ್ಲಿ, ಪಿ. ರಾಘವೇಂದ್ರರಾವ್, ಎಂ. ಎ. ನಾರಾಯಣರಾವ್, ಬಿ. ಭೀಮರಾವ್, ಎಂ. ಹುಸೇನ್ ಆಲಿಯವರು ಇವರಿಗೆ ಗುರುಗಳಾಗಿದ್ದರು. ಮಿರ್ಜಾ ಇಸ್ಮಾಯಿಲ್, ಲಕ್ಷ್ಮೀಕಾಂತರಾಜ ಅರಸ್, ಟಿ. ಎಸ್. ಅಲಿ ಖಾನ್, ಎಂ. ಎಸ್. ರಾಮಚಂದ್ರರಾವ್ ಮತ್ತಿತರರು ಸಹಪಾಠಿಗಳಾಗಿದ್ದರು. ಆಂಗ್ಲ ಶಿಕ್ಷಣದ ಜೊತೆಗೆ ವೈಚಾರಿಕ – ವೈಜ್ಞಾನಿಕ ದೃಷ್ಟಿಕೋನಗಳಲ್ಲಿ ಪಳಗಿದರು. ಕುದುರೆ ಸವಾರಿ, ಅಂಗಸಾಧನೆ, ಚಿತ್ರಕಲೆ, ಸಂಗೀತವನ್ನೂ ಕಲಿತರು. ಕನ್ನಡ, ಇಂಗ್ಲೀಷ್, ಸಂಸ್ಕೃತ, ಪಾರ್ಸಿ, ಉರ್ದು ಭಾಷೆಗಳ ಪಾಂಡಿತ್ಯ ಪಡೆದರು.

ತಂದೆಯವರಾದ ಶ್ರೀ ಚಾಮರಾಜ ಒಡೆಯರ್‍ರವರು 1894ರಲ್ಲಿ ಕಲ್ಕತ್ತಾದಲ್ಲಿದ್ದಾಗ ಗಂಟಲು ಬೇನೆಗೆ ತುತ್ತಾಗಿ ಮರಣಿಸಿದರು. ನಾಲ್ವಡಿ ಕೃಷ್ಣರಾಜ ಒಡೆಯರ್‍ರವರಿಗೆ 01.02.1895ರಂದು ಪಟ್ಟಾಭಿಷೇಕವಾಯಿತು. ಅವರು ಪ್ರಾಪ್ತ ವಯಸ್ಸಿಗೆ ಬರುವವರೆಗೆ ಅಂದಿನ ವೈಸ್‍ರಾಯ್ ಮತ್ತು ಗವರ್ನರ್ ಜನರಲ್ ಆಗಿದ್ದ ಎಲ್ಗಿನ್‍ರವರು ತಾಯಿ ಕೆಂಪನಂಜಮ್ಮಣ್ಣಿಯವರಿಗೆ ಮೈಸೂರು ಸಂಸ್ಥಾನದ ರಾಜಪ್ರತಿನಿಧಿ (ರೀಜೆಂಟ್) ಯಾಗಿ ಅಧಿಕಾರ ವಹಿಸಿಕೊಟ್ಟರು. ಭಾರತೀಯ ನಾಗರೀಕ ಸೇವಾ (ಐಸಿಎಸ್) ಅಧಿಕಾರಿಯಾದ ಸರ್ ಸ್ಟುವರ್ಟ್ ಮಿಟ್‍ಪೋರ್ಡ್ ಫ್ರೇಸರ್ ರವರು ಮಹಾರಾಜರ ಟ್ಯೂಟರ್ ಆಗಿ 1896ರಲ್ಲಿ ನೇಮಕವಾದರು. ಫ್ರೇಸರ್ ರವರ ಮೂಲಕ ನಾಲ್ವಡಿಯವರಿಗೆ ದೇಶದ ಅನೇಕ ಪ್ರಾಂತ್ಯಗಳ ಆಡಳಿತದ ಪರಿಚಯ ಮಾಡಿಕೊಡಲಾಯಿತು. ಗಣ್ಯ ವ್ಯಕ್ತಿಗಳ ಗೆಳೆತನವಾಯಿತು. ಕೋರ್ಟು ಕಚೇರಿಗಳ ನ್ಯಾಯವಿಧಾನಗಳ ಖುದ್ದು ಮನನವಾಯಿತು.

ನಾಲ್ವಡಿ ಕೃಷ್ಣರಾಜ ಒಡೆಯರ್‍ರವರಿಗೆ 16 ವರ್ಷಗಳಾದಾಗ 06.06.1900 ರಲ್ಲಿ ಕಾಥೇವಾಡದ ರಾಜವಂಶದ ಪ್ರತಾಪಕುಮಾರಿ ದೇವಿಯವರೊಡನೆ ವಿವಾಹವಾಯಿತು. ಅಂದಿನ ಮೈಸೂರು ಸಂಸ್ಥಾನದಲ್ಲಿ ಮೈಸೂರು, ಬೆಂಗಳೂರು, ಚಿತ್ರದುರ್ಗ, ಕೋಲಾರ, ಹಾಸನ, ಕಡೂರು, ಶಿವಮೊಗ್ಗ ಮತ್ತು ತುಮಕೂರು ಹೀಗೆ ಒಟ್ಟು ಎಂಟು ಜಿಲ್ಲೆಗಳಿದ್ದವು. 1939ರಲ್ಲಿ ಮಂಡ್ಯ ಒಂಬತ್ತನೇ ಜಿಲ್ಲೆಯಾಯಿತು. ರಾಜರ್ಷಿಯವರ ಆಡಳಿತಕ್ಕೆ ಒಳಪಟ್ಟ ಪ್ರಜೆಗಳೇ ಧನ್ಯರು.

ನಾಲ್ವಡಿ ಕೃಷ್ಣರಾಜ ಒಡೆಯರರ ಜನಪರ ಆಡಳಿತವನ್ನು ಕವಿ ಹನಸೋಗೆ ಸೋಮಶೇಖರ್ ‘ಮರೆಯೋದುಂಟೆ ಮೈಸೂರು ದೊರೆಯಾ, ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯಾ’ ಎಂಬ ಹಾಡಿನಲ್ಲಿ ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿದ್ದಾರೆ. ಅವರೊಬ್ಬ ತತ್ವಜ್ಞಾನಿ ದೊರೆಯಾಗಿದ್ದರು. ಪ್ಲೇಟೋರ ಗಣರಾಜ್ಯದ ಪರಿಕಲ್ಪನೆಯನ್ನು ಸಾಕಾರಗೊಳಿಸುವಲ್ಲಿ ಯಶಸ್ವಿಯಾದರು. ಸಾಮ್ರಾಟ್ ಅಶೋಕರ ಆಳ್ವಿಕೆಯ ಹೋಲಿಕೆಗೆ ತುಂಬಾ ಹತ್ತಿರವಾದರು. ಸಮಕಾಲೀನ ಮಹಾರಾಜರಾದ ಬರೋಡಾದ ಸಯ್ಯಾಜಿರಾವ್ ಗಾಯಕವಾಡ್ ಮತ್ತು ಕೊಲ್ಲಾಪುರದ ಶಾಹು ಮಹಾರಾಜರಂತೆ ಸಾಮಾಜಿಕ ನ್ಯಾಯದ ಹರಿಕಾರರಾದರು. ದಿವಾನರಾಗಿ ಮಿರ್ಜಾ ಇಸ್ಮಾಯಿಲ್‍ರವರು ಪ್ರತಿನಿಧಿಸಿದ್ದ ಇಂಗ್ಲೆಂಡಿನಲ್ಲಿನ ನಡೆದ 1930ರಲ್ಲಿ ನಡೆದ ದುಂಡುಮೇಜಿನ ಪರಿಷತ್ತಿನಲ್ಲಿ ನಾಲ್ವಡಿಯವರ ಆಡಳಿತವು ‘ಇಡೀ ದೇಶದಲ್ಲಿಯೇ ಉತ್ತಮ ರಾಜ್ಯ’ ಎಂಬ ಪ್ರಶಂಸೆಗೊಳಗಾಯಿತು.

ನಾಲ್ವಡಿಯವರಿಗೆ ದಿವಾನರಾಗಿ ಪಿ. ಎನ್. ಕೃಷ್ಣಮೂರ್ತಿ (1901-1906), ವಿ. ಪಿ. ಮಾಧವರಾವ್ (1906-1909), ಟಿ. ಆನಂದರಾವ್ (1909-1912), ಎಂ. ವಿಶ್ವೇಶ್ವರಯ್ಯ (1912 – 1918), ಎಂ. ಕಾಂತರಾಜ ಅರಸ್ (1918-1922), ಎ. ಆರ್. ಬ್ಯಾನರ್ಜಿ (1922-1926) ಮತ್ತು ಮಿರ್ಜಾ ಇಸ್ಮಾಯಿಲ್ (1926 – 1940) ಅವರು ಸೇವೆ ಸಲ್ಲಿಸಿದರು.

ಕಾವು ಪಡೆದುಕೊಳ್ಳುತ್ತಿದ್ದ ಸ್ವಾತಂತ್ರ್ಯ ಹೋರಾಟ ಮಹಾತ್ಮ ಗಾಂಧಿಯವರ ಸಲಹೆಯಂತೆ ಮೈಸೂರು ಸಂಸ್ಥಾನಕ್ಕೂ ವ್ಯಾಪಿಸಿತು. ಗಾಂಧಿಯವರಿಗೆ ಮೈಸೂರು ಮಹಾರಾಜರು ಮತ್ತು ದಿವಾನರೊಂದಿಗೆ ಚರ್ಚಿಸುವ ಸ್ವಾತಂತ್ರ್ಯ ನೀಡಲಾಗಿತ್ತು. ಗಾಂಧಿಯವರು ನಾಲ್ವಡಿಯವರ ಆಡಳಿತವನ್ನು ಮೆಚ್ಚಿ ‘ರಾಜರ್ಷಿ’ ಎಂಬ ಬಿರುದು ಕೊಟ್ಟರು. ಮೈಸೂರಿನ ಕಾಂಗ್ರೆಸ್ ಮುಂದಾಳುಗಳು ಮದ್ದೂರು ತಾಲ್ಲೂಕಿನ ಶಿವಪುರದಲ್ಲಿ 1938ರಲ್ಲಿ ಕಾಂಗ್ರೆಸ್ ಧ್ವಜಾರೋಹಣ ಮಾಡುವ ‘ಶಿವಪುರ ಧ್ವಜಸತ್ಯಾಗ್ರಹ’ವನ್ನು ಹಮ್ಮಿಕೊಂಡರು. ಮೈಸೂರು ಮಹಾರಾಜರ ಗಂಡಭೇರುಂಡದ ಧ್ವಜಕ್ಕೆ ಇದರಿಂದ ಅಪಮಾನವಾಗುತ್ತದೆ ಎಂದು ಭಾವಿಸಲಾಗಿತ್ತು. ಕಾಂಗ್ರೆಸ್ ಧ್ವಜಾರೋಹಣದ ನಂತರ ಕೆಲವರನ್ನು ಬಂಧಿಸಲಾಯಿತು. ಅದೇ ವರ್ಷ ಗೌರಿಬಿದನೂರಿನ ಬಳಿಯ ವಿಧುರಾಶ್ವತ್ಥದಲ್ಲಿ ಧ್ವಜಾರೋಹಣದಿಂದ ಗಲಭೆ ಸೃಷ್ಟಿಯಾಗಿ ಗೋಲಿಬಾರ್‍ನಿಂದ 32 ಜನರು ಸತ್ತರು. ಇಂತಹ ಘಟನೆಗಳಿಂದ ಸಾವರಿಸಿಕೊಳ್ಳುವುದರೊಳಗೆ ತಮ್ಮ ಜನಾನುರಾಗಿ ಆಡಳಿತಕ್ಕೆ ಜೊತೆಯಾಗಿದ್ದ ಸಹೋದರ ಯುವರಾಜ ಕಂಠೀರವ ನರಸಿಂಹರಾಜ ಒಡೆಯರ್ ಅವರು 09.03.1940ರಂದು ಮರಣಹೊಂದಿದರು. ತಮ್ಮನ ಮರಣದ ಕೊರಗು ನಾಲ್ವಡಿಯವರನ್ನು ತೀವ್ರವಾಗಿ ಬಾಧಿಸಿತು. ಜುಲೈ 30, 1940ರಂದು ಬೆಂಗಳೂರಿನಲ್ಲಿ ಹೃದಯಾಘಾತಕ್ಕೆ ಒಳಗಾದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು 03.08.1940ರಂದು ಕೊನೆಯುಸಿರೆಳೆದರು.

ಪ್ರಜೆಗಳ ಕಲ್ಯಾಣಕ್ಕಾಗಿ ನಿರಂತರ ಶ್ರಮಿಸಿದ ನಾಲ್ವಡಿ ಕೃಷ್ಣರಾಜ ಒಡೆಯರ್‍ರವರ ಪ್ರಗತಿ ಪಥದ ಆಡಳಿತದ (1902-1940) ಮೈಲಿಗಲ್ಲುಗಳನ್ನು ಮೆಲುಕು ಹಾಕಬೇಕು. ಅವರ ಆಡಳಿತದ ಪ್ರಮುಖ ಸಾಧನೆಗಳ ಪಟ್ಟಿ:
1. ಮೈಸೂರು ರಾಜ್ಯ ರೈಲ್ವೆಯ ನಿರಂತರ ವಿಸ್ತರಣೆ (1891-1930)
2. ವಾಣಿವಿಲಾಸ ಅಣೆಕಟ್ಟು, ಚಿತ್ರದುರ್ಗ : ನಾಲ್ವಡಿಯವರ ಮಾತೃಶ್ರೀಯವರಾದ ಕೆಂಪನಂಜಮ್ಮಣ್ಣಿ ವಾಣಿವಿಲಾಸ ಸನ್ನಿಧಾನ ಅವರು ಆಡಳಿತವನ್ನು ನಿಭಾಯಿಸುತ್ತಿದ್ದರು. ಅವರ ಹೆಸರಿನಲ್ಲಿ ವಾಣಿವಿಲಾಸ ಅಣೆಕಟ್ಟು (1897-1907).
3. ಮೈಸೂರು ಅರಮನೆ (1897-1912)
4. ಶಿವನಸಮುದ್ರ ಜಲವಿದ್ಯುತ್ ಉತ್ಪಾದನಾ ಯೋಜನೆ (1902)
5. ಕೋಲಾರ ಚಿನ್ನದ ಗಣಿ ಪ್ರದೇಶಕ್ಕೆ (ಕೆಜಿಎಫ್) ವಿದ್ಯುತ್ ಪೂರೈಕೆ (1902)
6. ಮೈಸೂರು ಸಂಸ್ಥಾನದ ಅಮೃತ್ ಮಹಲ್ ಕಾವಲುಗಳ ಅಭಿವೃದ್ಧಿ (1902-1940)
7. ಪ್ರಥಮ ವಾಣಿಜ್ಯ ಶಾಲೆ, ಬೆಂಗಳೂರು (1902)
8. ತಾಂತ್ರಿಕ ಶಾಲೆ, ಮೈಸೂರು (1903)
9. ಸಿಟಿ ಇಂಪ್ರೂವ್‍ಮೆಂಟ್ ಟ್ರಸ್ಟ್ ಬೋರ್ಡ್ (ಸಿಐಟಿಬಿ) : ದೇಶದಲ್ಲೇ ಪ್ರಥಮ ಯೋಜನೆ: ಅದು ಈಗ ಬಿಡಿಎ, ಮೂಡಾ ಮುಂತಾದ ಹೆಸರುಗಳಿಂದ ಕಾರ್ಯನಿರ್ವಹಣೆ (1904)
10. ಬೆಂಗಳೂರು ನಗರಕ್ಕೆ ವಿದ್ಯುತ್ ಪೂರೈಕೆ (1904)
11. ದೇಶದಲ್ಲೇ ಮೊಟ್ಟಮೊದಲ ಬಾರಿಗೆ ರಸ್ತೆಗಳಿಗೆ ದಾರಿದೀಪ ಅಳವಡಿಕೆ (1905)
12. ಸಹಕಾರಿ ಸಂಘಗಳ ಕಾಯಿದೆ (1905)
13. ಬೆಂಗಳೂರು ಕೇಂದ್ರ ಸಹಕಾರಿ ಬ್ಯಾಂಕ್ ಸ್ಥಾಪನೆ (1905)
14. ಮೈಸೂರು ಜಯಲಕ್ಷ್ಮಿ ಮಹಲ್ (1905)
15. ಮೈಸೂರು ನಗರಕ್ಕೆ ವಿದ್ಯುತ್ ಪೂರೈಕೆ (1906)
16. ಕೃಷಿ ಶಾಲೆ, ಹೆಬ್ಬಾಳ, ಬೆಂಗಳೂರು ಆರಂಭಿಸಲು ನಾಲ್ವಡಿಯವರ ಮಾತೃಶ್ರೀಯವರಾದ ಕೆಂಪನಂಜಮ್ಮಣ್ಣಿ ವಾಣಿವಿಲಾಸ ಸನ್ನಿಧಾನ ಅವರು 30 ಎಕರೆ ಭೂಮಿಯನ್ನು ಕೊಡುಗೆಯಾಗಿ ನೀಡಿದರು (1906)
17. ಮೈಸೂರಿನ ತಿಲಕ್‍ನಗರದಲ್ಲಿ ಕುರುಡ ಮತ್ತು ಮೂಗ ಮಕ್ಕಳ ಶಾಲೆ (1906)
18. ಬೆಂಗಳೂರು – ಚಿಕ್ಕಬಳ್ಳಾಪುರ ಮೀಟರ್ ಗೇಜ್ ರೈಲು ಮಾರ್ಗ (1906)
19. ಮೈಸೂರು ಲೆಜಿಸ್ಲೆಟೀವ್ ಕೌನ್ಸಿಲ್ (1907)
20. ನ್ಯಾಯವಿಧೇಯಕ ಸಭೆಯ ರಚನೆ (1907)
21. ಭಾರತೀಯ ವಿಜ್ಞಾನ ಸಂಸ್ಥೆ ಸ್ಥಾಪನೆಗೆ 371 ಎಕರೆ ಭೂಮಿ ಮತ್ತು 5 ಲಕ್ಷ ರೂಪಾಯಿಗಳ ಕೊಡುಗೆ (1907)
22. ದೇವಾಲಯಗಳಲ್ಲಿ ದೇವದಾಸಿಯರ ಹಾಗೂ ನೃತ್ಯ ಕನ್ಯೆಯರ ನೇಮಕದ ನಿಷೇಧದ ಆಜ್ಞೆ (1909)
23. ಮುಜರಾಯಿ ದೇವಸ್ಥಾನಗಳಲ್ಲಿ ‘ಗೆಜ್ಜೆಪೂಜೆ’ ನಿಷೇಧ (1910)
24. ಮೈಸೂರು ಚೆಲುವಾಂಬ ಮಹಲ್ : ಈಗ ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಸ್ಥೆಯ ಸುಪರ್ದಿಯಲ್ಲಿದೆ (1910)
25. ಭಾರತೀಯ ವಿಜ್ಞಾನ ಸಂಸ್ಥೆ ಸ್ಥಾಪನೆಗೆ ಶಿಲಾನ್ಯಾಸ (1911)
26. ಎಸ್. ಎಸ್. ಎಲ್. ಸಿ. ಪರೀಕ್ಷೆಗಳ ಪ್ರಾರಂಭ (1911)
27. ಕೃಷ್ಣರಾಜ ಸಾಗರ (ಕೆ.ಆರ್.ಎಸ್. / ಕನ್ನಂಬಾಡಿ) ಅಣೆಕಟ್ಟು ನಿರ್ಮಾಣ (1911-1932)
28. ಅಪ್ರಾಪ್ತ ವಯಸ್ಕರಲ್ಲಿ ಧೂಮಪಾನ ತಡೆಗಟ್ಟುವಿಕೆಯ ಕಾನೂನು (1911)
29. ಕೆರೆಗಳ ನಿರ್ವಹಣೆಗೆ ‘ಟ್ಯಾಂಕ್ ಪಂಚಾಯತ್ ರೆಗ್ಯುಲೇಟಿಂಗ್ ಆಕ್ಟ್’, 1000 ಕೆರೆಗಳ ಅಭಿವೃದ್ಧಿ (1911)
30. ವಯಸ್ಕರ ಶಿಕ್ಷಣಕ್ಕಾಗಿ ಶಾಲೆಗಳು (1912)
31. ಶಿಂಷಾ ನದಿಗೆ ಅಡ್ಡಲಾಗಿ ಕುಣಿಗಲ್ ತಾಲ್ಲೂಕಿನಲ್ಲಿ ಮಾರ್ಕೋನಹಳ್ಳಿ ಅಣೆಕಟ್ಟು (1912-1930)
32. ಕೃಷಿ ಇಲಾಖೆಯ ಪ್ರಥಮ ನಿರ್ದೇಶಕರಾಗಿ ಕೆನಡಾ ದೇಶದ ವಿಜ್ಞಾನಿಯಾದ ಡಾ. ಲೆಸ್ಲೀ ಕೋಲ್‍ಮನ್ ನೇಮಕ (1913)
33. ಕೃಷಿ ಶಾಲೆ, ಹೆಬ್ಬಾಳ, ಬೆಂಗಳೂರು ಪ್ರಾರಂಭ (1913)
34. ಸ್ಟೇಟ್ ಬ್ಯಾಂಕ್ ಆಫ್ ಮೈಸೂರು (1913)
35. ಮಿಂಟೋ ಕಣ್ಣಿನ ಆಸ್ಪತ್ರೆ, ಬೆಂಗಳೂರು (1913)
36. ಕಡ್ಡಾಯ ಪ್ರಾಥಮಿಕ ಶಿಕ್ಷಣ ಕಾಯ್ದೆ (1913)
37. ಮೈಸೂರು ರೇಷ್ಮೆ ಇಲಾಖೆಯ ಸ್ಥಾಪನೆ (1913-14)
38. ಪ್ರವಾಸಿ ಕೇಂದ್ರವಾಗಿ ನಂದಿಬೆಟ್ಟದ ಅಭಿವೃದ್ಧಿ (1914)
39. ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆ (1915)
40. ಮಹಿಳೆಯರ ಶಿಕ್ಷಣಕ್ಕೆ ಆಧ್ಯತೆ (1915-16)
41. ಮೈಸೂರು ವಿಶ್ವವಿದ್ಯಾಲಯ ಸ್ಥಾಪನೆ (1916)
42. ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಸಹ ನಿರ್ಮಾತೃ, ಪ್ರಥಮ ಕುಲಾಧಿಪತಿ (1916)
43. ಮೈಸೂರು ಚೇಂಬರ್ ಆಫ್ ಕಾಮರ್ಸ್ (1916)
44. ಸರ್ಕಾರಿ ಶ್ರೀಗಂಧದ ಎಣ್ಣೆಯ ಫ್ಯಾಕ್ಟರಿ (1916-17)
45. ಸರ್ಕಾರಿ ಇಂಜಿನಿಯರಿಂಗ್ ಕಾಲೇಜು, ಬೆಂಗಳೂರು: ಈಗ ವಿಶ್ವವಿದ್ಯಾಲಯ
ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜು ಎಂದು ಕರೆಯಲಾಗುತ್ತಿದೆ (1917).
46. ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು, ಮೈಸೂರು (1917)
47. ಚಿಕ್ಕಬಳ್ಳಾಪುರ – ಯಲಹಂಕ ಮತ್ತು ಮೈಸೂರು – ಅರಸೀಕೆರೆ ಮೀಟರ್ ಗೇಜ್ ರೈಲು ಮಾರ್ಗ (1918)
48. ಸರ್ ಲೆಸ್ಲಿ ಮಿಲ್ಲರ್ ಆಯೋಗದ ರಚನೆ: ಹಿಂದುಳಿದ ಸಮುದಾಯಗಳಿಗೆ ರಾಜ್ಯದ ಆಡಳಿತದಲ್ಲಿ ಪ್ರಾತಿನಿಧ್ಯ ನೀಡುವ ಉದ್ದೇಶದಿಂದ 23.08.1918 ರಲ್ಲಿ ಆಯೋಗ ರಚನೆ, 18.07.2019 ರಲ್ಲಿ ವರದಿ ಸಲ್ಲಿಕೆ. (1918-1919)
49. ಸಾರ್ವಜನಿಕ ಶಾಲೆಗಳಲ್ಲಿ ಎಲ್ಲಾ ಜಾತಿಯವರಿಗೆ ಪ್ರವೇಶ ನೀಡಲು ಗೆಜೆಟ್ ಪ್ರಕಟಣೆ (1918)
50. ಮೈಸೂರು ಬಾಯ್ಸ್ ಸ್ಕೌಟ್ಸ್ ಸಂಸ್ಥೆ : ದೇಶದಲ್ಲೇ ಪ್ರಥಮ (1918-19)
51. ಪ್ರೌಢಶಿಕ್ಷಣದವರೆಗೆ ಉಚಿತ ಶಿಕ್ಷಣ ಮತ್ತು ಹಿಂದುಳಿದವರಿಗೆ ವಿದ್ಯಾರ್ಥಿವೇತನ ಪ್ರಾರಂಭ (1918)
52. ಮೈಸೂರು ಕೆಮಿಕಲ್ಸ್ ಮತ್ತು ಫರ್ಟಿಲೈಸರ್ಸ್ ಕಾರ್ಖಾನೆ (1919)
53. ದೇವದಾಸಿ ಪದ್ದತಿ ನಿರ್ಮೂಲನೆಗೆ ಪೂರಕವಾಗಿ ದೇವದಾಸಿಯರಿಗೆ ಇನಾಂ ಭೂಮಿ ನೀಡುವ ಪದ್ದತಿಯ ನಿಷೇಧ (1919)
54. ಹತ್ತು ರೇಷ್ಮೆ ಕೈಗಾರಿಕಾ ತರಬೇತಿ ಕೇಂದ್ರಗಳ ಪ್ರಾರಂಭ (1919)
55. ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಘಟಿಕೋತ್ಸವ ಭಾಷಣದಲ್ಲಿ ಸರ್ವಧರ್ಮ, ಸರ್ವಜನಾಂಗಕ್ಕೂ ಶಿಕ್ಷಣ ನೀಡುವ ರಾಷ್ಟ್ರಮಟ್ಟದ ವಿವಿಯಾಗಲಿ ಎಂದು ಆಶಿಸಿದರು (1919)
56. ಮೈಸೂರಿನಲ್ಲಿ ಅಖಿಲ ಭಾರತ ಡಿಪ್ರೆಸ್ಸೆಡ್ ಕ್ಲಾಸಸ್ ಸಮ್ಮೇಳನದ ಆಯೋಜನೆ, ಕೊಲ್ಲಾಪುರದ ಶಾಹು ಮಹಾರಾಜ್ ಅವರ ಪ್ರತಿನಿಧಿಯಾಗಿ ಸತ್ಯಶೋಧಕ ಸಮಾಜದ ವಿ. ಆರ್. ಶಿಂಧೆ ಭಾಗವಹಿಸಿದ್ದರು (1919-1920)
57. ಮೈಸೂರು ಸೋಶಿಯಲ್ ಪ್ರೋಗ್ರೆಸ್ ಅಸೋಸಿಯೇಷನ್ (1920)
58. ಮಿಲ್ಲರ್ ಆಯೋಗದ ಶಿಫಾರಸ್ಸಿನಂತೆ ಬ್ರಾಹ್ಮಣೇತರರಿಗೆ ಶೇ. 75 ರಷ್ಟು ಮೀಸಲಾತಿ (1921)
59. ಮಾಧ್ಯಮಿಕ ಶಾಲೆಗಳಲ್ಲಿ ಏಕರೀತಿಯ ದ್ವಿಭಾಷಾ ಸೂತ್ರ (1921)
60. ಸರ್ಕಾರಿ ವಿಜ್ಞಾನ ಕಾಲೇಜು, ಬೆಂಗಳೂರು (1921)
61. ಚಿಕ್ಕಜಾಜೂರು – ಚಿತ್ರದುರ್ಗ ಮೀಟರ್ ಗೇಜ್ ರೈಲು ಮಾರ್ಗ (1921)
62. ಚಿಕ್ಕಬಳ್ಳಾಪುರ – ಬಂಗಾರಪೇಟೆ ಮತ್ತು ಬೀರೂರು – ತಾಳಗುಪ್ಪ ಮೀಟರ್ ಗೇಜ್ ರೈಲುಮಾರ್ಗ (1921)
63. ಲಲಿತ್ ಮಹಲ್ ಪ್ಯಾಲೇಸ್, ಮೈಸೂರು (1921)
64. ಒಟ್ಟು 32 ಲಂಬಾಣಿ ವಸತಿ ಶಾಲೆಗಳ ಆರಂಭ, ಬಿಳಿಗಿರಿರಂಗನ ಬೆಟ್ಟದಲ್ಲಿ ಸೋಲಿಗರಿಗಾಗಿ ನಾಲ್ಕು ಶಾಲೆಗಳು, ಕಾಕನಕೋಟೆ ಅರಣ್ಯ ಪ್ರದೇಶದಲ್ಲಿ ಜೇನುಕುರುಬ ಮತ್ತು ಕುಂಬಿ ಜನಾಂಗದವರಿಗೆ 5 ಶಾಲೆಗಳು, ಕೋಲಾರ ಜಿಲ್ಲೆಯಲ್ಲಿ ಬೋವಿ ಜನಾಂಗದವರಿಗಾಗಿ 3 ಶಾಲೆಗಳು (1921-22)
65. ಶಾಸನದ ಮೂಲಕ ಪ್ರಜಾಪ್ರತಿನಿಧಿ ಸಭೆಯಲ್ಲಿ ಶೋಷಿತ ವರ್ಗಗಳಿಗೆ 35, ಅಲ್ಪಸಂಖ್ಯಾತರಿಗೆ 35 ಮತ್ತು ಗ್ರಾಮಾಂತರ ಅಭ್ಯರ್ಥಿಗಳಿಗೆ 163 ಸ್ಥಾನಗಳನ್ನು ನಿಗದಿಗೊಳಿಸಲಾಯಿತು (1923)
66. ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ, ಭದ್ರಾವತಿ (1923)
67. ವುಡ್ ಡಿಸ್ಟಿಲ್ಲೇಷನ್ ಫ್ಯಾಕ್ಟರಿ, ಭದ್ರಾವತಿ (1923)
68. ಮೈಸೂರು ಮೆಡಿಕಲ್ ಕಾಲೇಜು (1924)
69. ಮೈಸೂರು ಪ್ರಾಂತೀಯ ಸಹಕಾರ ಅಪೆಕ್ಸ್ ಬ್ಯಾಂಕ್ (1925)
70. ನಿಮ್ಹಾನ್ಸ್ ಆಸ್ಪತ್ರೆ ನಿರ್ಮಾಣಕ್ಕೆ 100 ಎಕರೆ ಭೂಮಿಯ ಕೊಡುಗೆ (1925)
71. ಕೃಷ್ಣರಾಜನಗರ ಪಟ್ಟಣ ಸ್ಥಾಪನೆ (1925-35)
72. ಚಿತ್ರದುರ್ಗ, ಶಿವಮೊಗ್ಗ, ಚಿಕ್ಕಮಗಳೂರು, ಸಾಗರದಲ್ಲಿ ಕೈಗಾರಿಕಾ ತರಬೇತಿ ಶಾಲೆಗಳು (1926)
73. ಕೃಷ್ಣರಾಜೇಂದ್ರ ಆಸ್ಪತ್ರೆ, ಮೈಸೂರು (1927)
74. ಯುವರಾಜ ಕಾಲೇಜು, ಮೈಸೂರು (1928)
75. ಕೃಷ್ಣರಾಜ ಮಾರುಕಟ್ಟೆ, ಬೆಂಗಳೂರು (1928)
76. ರೈತರು ಸಾಲದ ಶೂಲಕ್ಕೆ ಸಿಲುಕಿಕೊಳ್ಳದಿರಲು ಅಗ್ರಿಕಲ್ಚರಿಸ್ಟ್ ಡೆಟ್ (ಸಾಲ) ರಿಲೀಫ್ ಕಾಯಿದೆ (1928)
77. ಕೆ. ಆರ್. ಮಿಲ್ಸ್, ಮೈಸೂರು (1929)
78. ಮಂಡ್ಯದಲ್ಲಿ 600 ಎಕರೆಗಳ ಕೃಷಿ ಪ್ರಾಯೋಗಿಕ ಕ್ಷೇತ್ರ / ವಿ.ಸಿ. ಫಾರಂ (1930)
79. ಇರ್ವಿನ್ ಕಾಲುವೆ / ವಿಶ್ವೇಶ್ವರಯ್ಯ ಕಾಲುವೆ ನಿರ್ಮಾಣ (1931-32)
80. ಮೈಸೂರು ಶುಗರ್ ಮಿಲ್ಸ್, ಮಂಡ್ಯ (1933)
81. ನಗರ ಮುನಿಸಿಪಾಲಿಟಿ ಕಾಯಿದೆ (1933)
82. ಹಿಂದೂ ಸ್ತ್ರೀಯರಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಸಿಗಲು ‘ದಿ ಹಿಂದೂ ಲಾ ವಿಮೆನ್ಸ್ ರೈಟ್ಸ್ ಆಕ್ಟ್’ (1933)
83. ಬೆಂಗಳೂರಿನ ಸರ್ ಪುಟ್ಟಣ್ಣ ಚೆಟ್ಟಿ ಟೌನ್ ಹಾಲ್ (1933-1935)
84. ಸರ್ ಸಿ. ವಿ. ರಾಮನ್ ಸಂಶೋಧನಾ ಸಂಸ್ಥೆ ಸ್ಥಾಪಿಸಲು ಬೆಂಗಳೂರಿನ ಮೇಖ್ರಿ ವೃತ್ತದ ಬಳಿ 10 ಎಕರೆ ಜಮೀನು ಕೊಡುಗೆ (1934)
85. ವಾಣಿವಿಲಾಸ್ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆ, ಬೆಂಗಳೂರು (1935)
86. ಅಸ್ಪೃಶ್ಯರಿಗೆ ಮೈಸೂರು ಅರಮನೆ ಪ್ರವೇಶಕ್ಕೆ ಅವಕಾಶ (1936)
87. ವೇಶ್ಯಾವೃತ್ತಿ ತಡೆಗಟ್ಟುವ ಕಾನೂನು (1936)
88. ಮೈಸೂರು ಪೇಪರ್ ಮಿಲ್ಸ್, ಭದ್ರಾವತಿ (1936)
89. ಮೈಸೂರು ಲ್ಯಾಂಪ್ಸ್, ಬೆಂಗಳೂರು (1936)
90. ಸೈಂಟ್ ಫಿಲೋಮಿನಾ ಚರ್ಚ್, ಮೈಸೂರು (1936)
91. ನಿಮ್ಹಾನ್ಸ್ ಆಸ್ಪತ್ರೆ, ಬೆಂಗಳೂರು (1936-37)
92. ಕಾರ್ಖಾನೆಗಳ ಗರ್ಭಿಣಿ ಕಾರ್ಮಿಕರಿಗೆ ಸಹಾಯವಾಗುವಂತೆ ‘ದಿ ಮೈಸೂರು ಮೆಟರ್ನಿಟಿ ಬೆನೆಫಿಟ್ ಆಕ್ಟ್’ (1937)
93. ಮೈಸೂರು ಪೇಂಟ್ಸ್ ಮತ್ತು ವಾರ್ನಿಷ್ ಕಂಪನಿ (1937)
94. ಬೆಂಗಳೂರಿನ ಮಹಾರಾಣಿ ಕಾಲೇಜು (1938)
95. ವಿಧವಾ ವಿವಾಹ ಪ್ರೋತ್ಸಾಹಕ್ಕಾಗಿ ‘ದಿ ಮೈಸೂರು ಹಿಂದೂ ವಿಡೋ ರೀ ಮ್ಯಾರೇಜ್ ಆಕ್ಟ್’ (1938)
96. ವಿಧವೆಯರ ಶಿಕ್ಷಣಕ್ಕಾಗಿ ವಸತಿಗೃಹ ಶಾಲೆಗಳ ನಿರ್ಮಾಣ (1938)
97. ಮಂಡ್ಯ ಜಿಲ್ಲೆ ರಚನೆ (1939)
98. ಸಾಗರದ ಬಳಿ ಶರಾವತಿ ನದಿಗೆ ಅಡ್ಡಲಾಗಿ ಹಿರೇಭಾಸ್ಕರ ಅಣೆಕಟ್ಟು (1939)
99. ಜೋಗ್ ಜಲಪಾತದ ಬಳಿ ವಿದ್ಯುತ್ ಉತ್ಪಾದನೆಗೆ ಶಂಕು ಸ್ಥಾಪನೆ (1939)
100. ಗ್ಲಾಸ್ ಮತ್ತು ಪಿಂಗಾಣಿ ಕಾರ್ಖಾನೆ, ಬೆಂಗಳೂರು (1939)
101. ಮೈಸೂರು ಕ್ರೋಮ್ ಮತ್ತು ಟ್ಯಾನಿಂಗ್ ಫ್ಯಾಕ್ಟರಿ (1940), ಮುಂತಾಗಿ…

… ಹೀಗೆ ಮೈಸೂರು ಸಂಸ್ಥಾನವು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಳ್ವಿಕೆಯಲ್ಲಿ ಅಚ್ಚಳಿಯದ ಪ್ರಗತಿಯತ್ತ ಸಾಗಿತು. ನಾಡು ಕಟ್ಟಿದ ನಾಲ್ವಡಿಯವರು ಕೊಡುಗೈ ದಾನಿಯಾಗಿದ್ದರು. ಅವರ ಸವಿನೆನಪು ಸದಾ ನಮ್ಮ ಮನದಲ್ಲಿರಲಿ. ಆಳುವವರಿಗೆ ದಾರಿದೀಪವಾಗಲಿ. ಇಂದಿನ ಕರ್ನಾಟಕ ರಾಜ್ಯವು ಇನ್ನಷ್ಟು ಪ್ರಗತಿಪಥದಲ್ಲಿ ಸಾಗಲಿ.

-ಪ್ರೊ. ಎಂ.ನಾರಾಯಣಸ್ವಾಮಿ ತ್ಯಾವನಹಳ್ಳಿ, ಬೆಂಗಳೂರು