ಅನುದಿನ‌ ಕವನ-೮೯೦, ಹಿಂದಿ ಕವಿಯಿತ್ರಿ: ರತಿ ಸೆಕ್ಸೆನಾ, ಕನ್ನಡ ಅನುವಾದ: ಭುವನಾ ಹಿರೇಮಠ, ಕಿತ್ತೂರು ಕವನದ ಶೀರ್ಷಿಕೆ: ತೊರೆಯುವ ಮುನ್ನ

ತೊರೆಯುವ ಮುನ್ನ

ಒಂದೊಂದೇ ಬಾಗಿಲು
ಮುಚ್ಚಿಬಿಡು
ಅಗುಳಿ ಬಿದ್ದ ಸಪ್ಪಳ ಕೇಳುವಂತೆ
ನೂಕಿ ಒತ್ತು ಕದವ

ತಪ್ಪಿಯೂ ಮತ್ಯಾವತ್ತೂ ಮರಳದಂತೆ
ಶಪತ ಮಾಡು
ಮುಂದೆ ಯಾರು ಬಂದು ಹೋಗುವರೊ ಶಂಕೆ ಬೇಡ
ಬಾಗಿಲಿಗೇ ಬಿಟ್ಟುಬಿಡುವಾ ಅದನೆಲ್ಲ

ತೊರೆಯುವ ಮುನ್ನ
ಪ್ರತಿ ಹೆಜ್ಜೆ ಗುರುತು
ಬೆರಳ ಸ್ಪರ್ಶ ಎಲ್ಲವನ್ನೂ
ಅಳಿಸಿಹಾಕು ಶಾಶ್ವತವಾಗಿ

ತೊರೆಯುವ ಮುನ್ನ
ಕಟ್ಟು ಗಂಟು ಮೂಟೆ
ಜಂಗು ತಿಂದ ಕತೆಗಳನ್ನೂ
ಆ ಒಂದು ಮೇಜು ಸವಿ ನೆನಪಿಂದ ಅಂದಗಾಣಲಿ

ತೊರೆಯುವ ಮುನ್ನ
ಪುಟಗಳ ನಡುವೆ ಸಿಲುಕಿ
ಒಣಗಿ ಹೋದ ಹೂವುಗಳಿಗಾಗಿ
ಪುಸ್ತಕಗಳ ಪುಟ ತಿರುವಿ ಹಾಕು

ತೊರೆಯುವ ಮುನ್ನ
ಅಳಿಸಿ ಹಾಕು ಪದಗಳ,
ಕಗ್ಗಂಟೆಲ್ಲ ಕತ್ತರಿಸಿ ಮುಕ್ತಗೊಳಿಸು

ನಿನ್ನ ದವಡೆಯ ಮೂಲೆಯಲಿ
ಬದುಕು ಬಂದು ಬೀಳೊ ಗಂಟಾ
ಕಸುವುಕಿತ್ತು ನಗುತ್ತಿರು

ತೊರೆಯುವ ಮುನ್ನ
ಮುಚ್ಚಿಬಿಡು ಕಟ್ಟಕಡೆಯ ಬಾಗಿಲನು
ಬಾಕಿ ಉಳಿದವೆಲ್ಲ
ತಂತಾನೇ ಬಡಿದುಕೊಳ್ಳಲಿ

ಹಿಂದಿ ಮೂಲ: ರತಿ ಸಕ್ಸೆನಾ


ಕನ್ನಡಾನುವಾದ : ಭುವನಾ ಹಿರೇಮಠ
*****