ಅನುದಿನ ಕವನ-೮೯೨, ಕವಿಯಿತ್ರಿ: ಮಂಜುಳಾ ಹುಲ್ಲಹಳ್ಳಿ, ಚಿಕ್ಕಮಂಗಳೂರು, ಕವನದ ಶೀರ್ಷಿಕೆ: ಹೆಸರಿಹುದೇ….

ಹೆಸರಿಹುದೇ….

ಮುಂಜಾವದಲಿ ಮಿರುಮಿರುಗಿ
ಹೊಳೆದು ಹೊಸರಂಗೀವ
ಇಬ್ಬನಿ ಮಣಿಗಳಿಗೇ?

ಮೂಡಲ ಮನೆಯಿಂದ
ಮುತ್ತಿನ ನೀರಿನ ಎರಕ ತರುವ
ರವಿಯ ಕಿರಣಗಳಿಗೆ?

ಕೆರೆಯ ಕೆಸರಲಿ ಅರಳಿ
ನಲಿವ ಬಯಸುವ ನೈದಿಲೆಗೆ
ಮುದವೀವ ಶಶಿಯ ಕದಿರುಗಳಿಗೆ?

ವನದಿ ವಿಕಸಿಸಿ ಪರಿಮಳಿಸಿ
ಜೇನ ಹರಿಸಿ ದುಂಬಿ ತಣಿಸೋ
ಕುಸುಮಪರಾಗದ ರೇಣುರೇಣುಗಳಿಗೆ?

ಎಲ್ಲೋ ಹುಟ್ಟಿ ಎಲ್ಲೇ ಹರಿದರೂ
ಜಗಕೆ ಲೇಸನುಣಿಸೋ
ನದಿನೀರಿನ ಕಣಕಣಗಳಿಗೆ?

ಬರಡು ನೆಲಕೆ ಹಸಿರನುಣಿಸಿ
ಜೀವಚೈತನ್ಯ ನೀಡುವ
ವರ್ಷಧಾರೆಯ ಹನಿಹನಿಗಳಿಗೆ?

ಈ ಕಣಕಣಗಳ ಕಣದ ಚೈತನ್ಯ
ಶಕ್ತಿಯ ಲೇಪವೂ ಇರದ
‘ನಾನು’ ಹೆಸರನುಳಿದು ಇರಬಲ್ಲೆನೇ
ಅರೆಗಳಿಗೆ…?


– ಮಂಜುಳಾ ಹುಲ್ಲಹಳ್ಳಿ, ಚಿಕ್ಕಮಗಳೂರು
*****