ಗಜಲ್
ಹೊರಗೆಲ್ಲೋ ಕೋಗಿಲೆ ಕೂಗಿದರೂ ನಿನ್ನ ಪಿಸುಮಾತಿನ ನೆನಪು
ತರಗೆಲೆ ಗಿರಕೆಂದರೂ ಸಾಕು ಮಧುರ ಹೆಜ್ಜೆಗಳ ಬರುವಿನ ನೆನಪು
ದುಂಬಿ ಝೇಂಕರಿಸುತಿದೆ ನಿನ್ನ ಮುಂಗುರುಳುಗಳ ನೆನಪ ಹೊತ್ತು
ಹೂಗಳು ಅರಳಿದರೂ ಸಾಕು ನಿನ್ನ ಚಂದದ ಕಿರು ನಗುವಿನ ನೆನಪು
ಸುರಿವ ಪ್ರತಿ ಮಳೆಹನಿಗಳಲೂ ಕಾಣುತಿಹುದು ನಿನ್ನ ಪ್ರತಿರೂಪ
ಮುಂಗಾರು ಮಳೆಯ ನೆಲದ ಘಮಲಿನಲೂ ನಿನ್ನ ತನುವಿನ ನೆನಪು
ಬೆಟ್ಟದಡಿಯಲಿ ತಲೆದೂಗುವ ಹೂಗಳಲಿ ನಿನ್ನ ಕದಪುಗಳ ರಂಗು
ತೆಳುಗಾಳಿಗೆ ಮೈಮುರಿವ ಎಳೆಗರಿಕೆಗಳಲೂ ನಿನ್ನ ಹೆರಳಿನ ನೆನಪು
ನೆನಪಿನ ದಿಬ್ಬಣದಲಿ ಚಂದದ ಕನಸಿನ ಕೌದಿ ಹೊದ್ದಿಹನು ’ಸಿದ್ಧ’
ಸುಳಿವ ಚಳಿಗಾಳಿಯಲೂ ಬೆವರಿದ ಮೈಮನದ ಬಿಸುಪಿನ ನೆನಪು
-ಸಿದ್ಧರಾಮ ಕೂಡ್ಲಿಗಿ, ವಿಜಯನಗರ ಜಿಲ್ಲೆ
(ಸ್ಕೆಚ್ : ಶ್ರೀಲಕ್ಷ್ಮಿ ಆದ್ಯಪಾಡಿ)
*****