ಬಳ್ಳಾರಿ ನಗರದ ಹಿರಿಯ ನೇತ್ರ ತಜ್ಞ, ಡಾ. ಕೊಂಡ್ಲಹಳ್ಳಿ ನಾಗರಾಜ ಅವರು ಇಂದು ವಿಧಿವಶವಾಗಿದ್ದಾರೆ. ಸಮಾಜಮುಖಿಯಾಗಿದ್ದ ಹಿರಿಯ ವೈದ್ಯರ ಒಡನಾಡಿ ಹಿರಿಯ ಪತ್ರಕರ್ತ, ಸಾಹಿತಿ ಚಂದ್ರಕಾಂತ ವಡ್ಡು ಅವರು ಅಕ್ಷರ ನಮನ ಸಲ್ಲಿಸಿದ್ದಾರೆ. ಕರ್ನಾಟಕ ಕಹಳೆ ಡಾಟ್ ಕಾಮ್ ಕೂಡಾ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸುತ್ತದೆ. (ಸಂಪಾದಕರು)
ಹೀಗೊಬ್ಬ ವೈದ್ಯರಿದ್ದರು!
ಊರು ಬಳ್ಳಾರಿ; ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ ಇರುವ ಕಾಂಟೋನ್ಮೆಂಟ್ ಪ್ರದೇಶ. ಅಲ್ಲೊಂದು ಕಣ್ಣಿನ ಆಸ್ಪತ್ರೆ. ಚಿಕಿತ್ಸೆಗಾಗಿ ಬಂದ ರೋಗಿಗಳಿಂದ ಸದಾ ತುಂಬಿ ತುಳುಕುವ ಆವರಣ. ನಂಬಿ ಬರುವ ರೋಗಿಗಳಿಗೆ ಒಂದಿನಿತೂ ತೊಂದರೆ ಆಗದಂತೆ ಸೇವೆ ಸಲ್ಲಿಸಲು ಸನ್ನದ್ಧರಾದ ಸಿಬ್ಬಂದಿ ಮತ್ತು ವೈದ್ಯರು…
ಆಸ್ಪತ್ರೆಯ ಆಡಳಿತ ನೋಡಿಕೊಳ್ಳುವ ವ್ಯವಸ್ಥಾಪಕರೊಬ್ಬರು ಸಂಸ್ಥೆಯ ಮುಖ್ಯಸ್ಥರಾದ ಹಿರಿಯ ವೈದ್ಯರೆದುರು ಅಂಜುತ್ತಾ, ಅಳುಕುತ್ತಾ ಅದೆಷ್ಟನೇ ಬಾರಿಯೋ ನಿವೇದಿಸಿಕೊಳ್ಳುತ್ತಾರೆ:
“ಸಾ…ರ್…, ನಮ್ಮ ಆಸ್ಪತ್ರೆಯಲ್ಲಿ ಕೇವಲ ನೂರು ರೂಪಾಯಿ ಕನ್ಸಲ್ಟೇಷನ್ ಶುಲ್ಕ ಪಡೆಯುತ್ತಿದ್ದೇವೆ. ಕಳೆದ ಎಷ್ಟೋ ವರ್ಷಗಳಿಂದ ಪರಿಷ್ಕರಣೆ ಮಾಡಿಲ್ಲ. ಎಲ್ಲಾ ಖರ್ಚುಗಳು ಹೆಚ್ಚಾಗುತ್ತಿವೆ. ಇನ್ನೂರು ರೂಪಾಯಿ ಮಾಡೋಣ…”
ಪ್ರತೀ ಬಾರಿ ಈ ಪ್ರಸ್ತಾವನೆ ಮುಂದಿರಿಸಿದಾಗಲೂ ಮಾಲೀಕ-ವೈದ್ಯರದು ನಕಾರಾತ್ಮಕ ಉತ್ತರ. ಕಾಲಕಾಲಕ್ಕೆ ಅವರ ನಿರಾಕರಣೆಯ ಕಾರಣಗಳು…
“ಬಡವರಿಗೆ ಯಾವ ಕಾರಣಕ್ಕೂ ನಮ್ಮ ಶುಲ್ಕ ಹೊರೆಯಾಗಬಾರದು…”
“ಈ ವರ್ಷ ಸರಿಯಾಗಿ ಮಳೆ ಇಲ್ಲದೆ ಜನ ಬರಗಾಲದಲ್ಲಿ ಬಳಲುತ್ತಿದ್ದಾರೆ. ಇಂಥ ಸಮಯದಲ್ಲಿ ಶುಲ್ಕ ಏರಿಕೆಯೇ…? ಬೇಡ…ಬೇಡ…”
“ಇದೀಗ ತಾನೇ ಜನರು ಕೋವಿಡ್ ಹಾವಳಿಯಿಂದ ಸುಧಾರಿಸಿಕೊಳ್ಳುತ್ತಿದ್ದಾರೆ… ಅವರ ಮೇಲೆ ಹೆಚ್ಚುವರಿ ಹೊರೆ ಹಾಕುವುದು ನ್ಯಾಯವಲ್ಲ…”
“ನಮಗೆ ಒಂದಿಷ್ಟು ಕಷ್ಟ ಆದರೂ ಪರವಾಗಿಲ್ಲ, ನಮ್ಮಲ್ಲಿ ಬರುವ ರೋಗಿಗಳಿಗೆ ಭಾರ ಹಾಕುವುದು ಬೇಡ…”
“ಮೊದಲೇ ಅತಿವೃಷ್ಟಿಯಿಂದ ಜನ ಕಂಗಾಲಾಗಿದ್ದಾರೆ. ಈಗ ಶುಲ್ಕ ಹೆಚ್ಚಳವೇ… ಛೇ…!”
ಹೀಗೇ ವರ್ಷಾನುಗಟ್ಟಲೆ ಮುಂದೂಡುತ್ತಲೇ ಹೋಯಿತು ವ್ಯವಸ್ಥಾಪಕರ ಶುಲ್ಕ ಪರಿಷ್ಕರಣೆ ಪ್ರಸ್ತಾವನೆ.
ಪರಿಸ್ಥಿತಿ ಹೀಗೇ ಸಾಗುತ್ತಿರಲು… ಎದುರಾದ ಮತ್ತೊಂದು ಬೆಳವಣಿಗೆ ವ್ಯವಸ್ಥಾಪಕರನ್ನು ಮತ್ತೊಮ್ಮೆ ಮಾಲೀಕರೆದುರು ಕರೆತಂದಿತು:
“ಸರ್… ಬೇರೆ ಆಸ್ಪತ್ರೆಗಳಲ್ಲಿ ಕನ್ಸಲ್ಟೇಷನ್ ಶುಲ್ಕ ನಮಗಿಂತ ನಾಲ್ಕು ಪಟ್ಟು ಹೆಚ್ಚಿದೆ. ಅಲ್ಲಿನ ವೈದ್ಯರು ನಾವು ಕಡಿಮೆ ಶುಲ್ಕ ಪಡೆಯುತ್ತಿರುವುದಕ್ಕೆ ಆಕ್ಷೇಪಣೆ ಮಾಡುತ್ತಿದ್ದಾರೆ… ಏನಾದರೂ ಮಾಡಲೇಬೇಕು…”
ಈ ವಿಷಯ ತಿಳಿದ ಮಾಲೀಕರು ನಿಜಕ್ಕೂ ಧರ್ಮ ಸಂಕಟಕ್ಕೆ ಸಿಲುಕಿದರು. ಒಂದೆಡೆ ಬಡ ರೋಗಿಗಳ ಬಗೆಗಿನ ಕಾಳಜಿ, ಇನ್ನೊಂದೆಡೆ ವೃತ್ತಿಬಾಂಧವರ ಸಕಾರಣ ತಕರಾರು. ಕೊನೆಗೆ ಅವರು ಹೇಳಿದ್ದು:
“ಶುಲ್ಕ ಹೆಚ್ಚಳಕ್ಕೆ ನನ್ನ ಮನಸ್ಸಂತೂ ಒಪ್ಪುತ್ತಿಲ್ಲ. ಹೆಚ್ಚಿಸುವುದೇ ಆದರೆ ಐವತ್ತು ರೂಪಾಯಿಗಿಂತ ಹೆಚ್ಚು ಬೇಡವೇ ಬೇಡ”
ಹೀಗೇ ಐವತ್ತು ರೂಪಾಯಿ ಶುಲ್ಕ ಹೆಚ್ಚಳಕ್ಕೆ ಐದು ವರ್ಷಗಳಷ್ಟು ಸುದೀರ್ಘ ಸಮಯ ತೆಗೆದುಕೊಂಡ ಹಿರಿಯ ವೈದ್ಯರ ಹೆಸರು ಡಾ.ಕೆ.ನಾಗರಾಜ. ಅವರು ತಮ್ಮ ವೈದ್ಯ ವೃತ್ತಿಯನ್ನು ಹಣಗಳಿಕೆಗೆ ಬಳಸದೇ ಬಡವರ ಸೇವೆಗೆ ಮುಡುಪಿಟ್ಟ ಮಹಾನುಭಾವ.
ಅವರು ಬಳ್ಳಾರಿ-ಚಿತ್ರದುರ್ಗ ಜಿಲ್ಲೆಗಳ ಬಡರೋಗಿಗಳ ವೈದ್ಯರು; ಮೂಲತಃ ಮೊಳಕಾಲ್ಮೂರು ಬಳಿಯ ಕೊಂಡ್ಲಹಳ್ಳಿ ಗ್ರಾಮದವರಾದ ಡಾ.ನಾಗರಾಜ್ ಅವರು ಈವರೆಗೆ ನಡೆಸಿದ ಉಚಿತ ಕಣ್ಣಿನ ಚಿಕಿತ್ಸೆ ಶಿಬಿರಗಳಿಗೆ ಲೆಕ್ಕವೇ ಇಲ್ಲ. ಈ ದೃಷ್ಟಿಯಲ್ಲಿ ಅವರು ಈ ಪ್ರದೇಶದ ಪದ್ಮಭೂಷಣ ಡಾ.ಎಂ.ಸಿ.ಮೋದಿ.
ಸಾವಿರಾರು ಜನರ ಕಣ್ಣುಗಳನ್ನು ದಶಕಗಳ ಕಾಲ ಜತನ ಮಾಡಿದ ಈ ಜನಾನುರಾಗಿ ವೈದ್ಯರು ಇಂದು ಕಣ್ಣು ಮುಚ್ಚಿದ್ದಾರೆ! ಇಂಥ ಅಪರೂಪದ ಜೀವಿಯ ನಿರ್ಗಮನದ ನಷ್ಟ ಭರಿಸುವುದು ಹೇಗೆ ತಾನೇ ಸಾಧ್ಯ?
ಅವರ ಮಗ ಡಾ.ವಿಜಯ್ ನಾಗರಾಜ್ ಮತ್ತು ಸೊಸೆ ಡಾ.ಗೀತಾ ಕೂಡ ಡಾ.ನಾಗರಾಜ್ ಅವರಷ್ಟೇ ಸಮಾಜಮುಖೀ ನೇತ್ರ ತಜ್ಞರು. ಅವರು ಹಿರಿಯರ ಪರಂಪರೆ ಮುಂದುವರಿಸಲು ಸಮರ್ಥರು ಎಂಬುದು ತುಸು ನೆಮ್ಮದಿಯ, ಭರವಸೆಯ ಸಂಗತಿ.
-ಚಂದ್ರಕಾಂತ ವಡ್ಡು, ಹಿರಿಯ ಪತ್ರಕರ್ತರು, ಬೆಂಗಳೂರು
*****