ಮಕ್ಕಳ ಪದ್ಯ
ನಮ್ಮನೆ ನೋಡಲು ಹಾರಿ ಬಂದ
ಹಕ್ಕಿ ಹಿಂಡು ನೋಡು
ತಂತಿ ಮೇಲೆ ಸಾಲಾಗ್ ಕೂತು
ಹಾಡ್ತಾವವು ಹಾಡು
ಟುವ್ವಿ ಟುವ್ವಿ ಹಾಡು…
ಆ ಊರ್ನಿಂದ ಈ ಊರ್ನಿಂದ
ಎಲ್ಲಾ ಒಟ್ಟು ಸೇರಿ
ಪಟ ಪಟ ರೆಕ್ಕೆ ಬಡ್ಕೊಂಡು
ಪಿಟಿ ಪಿಟಿ ಹಿಕ್ಕೆ ಹಾಕೊಂಡು
ಮೂತಿ ನೋಡಿ ನಕ್ಕೊಂಡು
ಪುರ್ರಂತ ಹಾರಿ
ಮತ್ತೆ ತಂತಿ ಏರಿ
ಒತ್ತೊತ್ತಾಗಿ ಕುಂತ್ಕೊಂಡು
ಪ್ರೀತಿಯಿಂದ್ಲೇ ಮೈ ಮುಟ್ಕೊಂಡು
ಲೋಕದ ವಿಷ್ಯ ಮಾತಾಡ್ತಾವೇನೋ?
ಜೋಕ್ಸು ಹೇಳ್ಕೊಂಡ್ ನಗ್ತಿರ್ತಾವೇನೋ?
ಗುಬ್ಬಿ ಥರನೇ ಕಾಣ್ತಾವಿವು
ಹೆಸ್ರು ಬೇರೆ ಐತೆ
ಮುದ್ದಾಗ್ ಕಾಣೋ ಇದರ ಹೆಸ್ರು
ಕವ್ಟೆ ಪಕ್ಷಿ ಅಂತೆ
ಅಕ್ಕಾ ಹೇಳೇ ಈ ಹಕ್ಕಿ ಮರಿಗಳ
ಶಾಲೆ ಎಲ್ಲೈತೆ?
ನೋಟ್ಸು ಪೆನ್ನು ಪಾಟಿ ಚೀಲ
ಎಲ್ಲಿಟ್ಟೈತೆ?
ಚೆಂದ ಅಲ್ವೇ ರೆಕ್ಕೆ ಹಚ್ಕೊಂಡ್
ಮೇಲೆ ಹಾರೋದು?
ಹಾಗೋ ಹೀಗೋ ಎತ್ತರೆತ್ತರಕೆ
ಏರ್ತಾ ಸಾಗೋದು?
– ರಮ್ಯ ಕೆ ಜಿ ಮೂರ್ನಾಡು, ಮಡಿಕೇರಿ
*****