ಅಪ್ಪ
ಬಹುತೇಕ ಕವಿಗಳು
ಅಪ್ಪನನ್ನು ಆಕಾಶಕ್ಕೆ ಹೋಲಿಸುತ್ತಾರೆ.
ನನಗೆಂದೂ ಹಾಗೇ ಅನ್ನಿಸಿಯೇ ಇಲ್ಲ.
ಸದಾ ಕೈಯ್ಯಳತೆಯಲ್ಲಿದ್ದು ತಬ್ಬಿ
ಮುದ್ದಾಡುವ
ಹೆಗಲ ಪಲ್ಲಕ್ಕಿಯ ಮೇಲೆ ಹೊತ್ತು
ಮೆರೆಸುವ
ಅಂಬಾರಿ ಮಾಡಿ
ನಲಿದಾಡಿಸುವ
ಅತ್ತಾಗ ಕಣ್ಣೊರೆಸಿ ಸಂತೈಸುವ
ಅಪ್ಪಟ ಹೃದಯವಂತ
ಲೋಕದ ಎಷ್ಟೋ ಅಪ್ಪಂದಿರಂತೆ
ನನ್ನಪ್ಪನೂ
ಯಾರಿಗೂ ಅಷ್ಟೊಂದು ಪರಿಚಯವಿರದ
ತೀರಾ ಸಾಮಾನ್ಯ ಮನುಷ್ಯ
ಎಷ್ಟೋ ಜನ ಅನಾಮಿಕರಂತೆ ಹುಟ್ಟಿ
ಅನಾಮಿಕರಂತೆಯೇ ಮಣ್ಣಾದವ
ಹುಟ್ಟಿದಾಗ ಇಟ್ಟ ಹೆಸರೊಂದನ್ನು ಬಿಟ್ಟರೆ
ಯಾವೊಂದು ಬಿರುದು ಬಾವಲಿಗಳಿಗೂ
ಹಂಬಲಿಸಿದವನಲ್ಲ
ಕೀರ್ತಿ ಪ್ರತಿಷ್ಠೆಗಳಿಗಾಗಿ
ತಹತಹಿಸಿದವನಲ್ಲ
ಊರಲ್ಲೊಂದು ದಿನಸಿ ಅಂಗಡಿಯಿದ್ದುದರಿಂದ
ಧಣಿ ಎಂಬ ಹೆಸರಿತ್ತಷ್ಟೇ
ಹೊಟ್ಟೆಬಟ್ಟೆಯ ಚಿಂತೆಯೊಂದು ಬಿಟ್ಟರೆ
ಮತ್ತೊಂದರ ವ್ಯಸನವಿಲ್ಲದವ
ಚಂದಮಾಮನ ಹೆಸರನ್ನೇ ಪಡೆದವ
ಸದಾ
ಚಂದ್ರನಂತೆಯೇ ನಕ್ಕವ
ಚಂದ್ರನಂತೆ ಇರುಳನ್ನೂ ಒಡಲಲ್ಲಿ ಹೊತ್ತವ!
ಇಂಥಹಾ ಅಪ್ಪನೊಂದು
ಅಲ್ಲಾವುದ್ದೀನನ ಅದ್ಭುತ ದೀಪದಂತೆ!
ಮಡದಿ ಮಕ್ಕಳ ಖುಷಿಗೆ
ನೋವು ನಲಿವಿಗೆ
ಮಿಡಿವವ
ಖುಲ್ಜಾ ಸಿಮ್ ಸಿಮ್ ಮಂತ್ರಕ್ಕೆ
ಸದಾ ಹೃದಯದ ಬಾಗಿಲನೆ ತೆರೆದಿಡುವವ
ಅಂಥಾ ಅಪ್ಪ ನಿರ್ವಾಣಗೊಂಡ ದಿನ
ಸ್ಮಶಾನದಲಿ
ಚಿತೆ ಹೊತ್ತಿ ಉರಿಯುತ್ತಿತ್ತು.
ಖುಲ್ಜಾ ಸಿಮ್ ಸಿಮ್ ಮಂತ್ರ ಶಕ್ತಿಹೀನಗೊಂಡಿತ್ತು!
ಮೇಲೆ ಚಂದಮಾಮನ ಕಣ್ಣಲ್ಲಿ
ನೀರು ತುಂಬಿತ್ತು
ನಮ್ಮೆದೆಗಳಲ್ಲಿ ಆವರಿಸಿಕೊಂಡ
ಅಗಾಧ ದು:ಖದ ಮುಂದೆ
ಆ ಆಕಾಶವೇ
ಕುಬ್ಜವೆನಿಸಿತ್ತು.
ಅದಕ್ಕೇ ಅಪ್ಪನನ್ನು
ಆಕಾಶಕ್ಕೆ ಹೋಲಿಸಲಾರೆ.
-ವೀರೇಂದ್ರ ರಾವಿಹಾಳ್, ಬಳ್ಳಾರಿ
*****
super