ನೆನಪುಗಳೇ ಹೀಗೆ ಕಳೆದು ಹೋದುದನ್ನೇ ಮತ್ತೆ ಮತ್ತೆ ಕೆದಕಿ ಗಾಯ ಮಾಡುತ್ತವೆ||
ಭಾವಗಳೇ ಹೀಗೆ ಬೇಡವಾದುದನ್ನೇ ಬೇಡಿ ಬೇಡಿ ದಣಿದು ದುಃಖ ಪಡುತ್ತವೆ||
ಅನುಭಾವಿಗಳ ನುಡಿ ಕೇಳಿ ಮನದ ಕಲ್ಮಶಗಳೆಲ್ಲ ಕ್ಷಣ ಹೊತ್ತು ಕರಗಿ ಬಿಡುತ್ತವೆ|
ಕೆಡಕುಗಳೇ ಹೀಗೆ ತೊರೆದುದನ್ನೇ ಅಪ್ಪಿಕೊಂಡು ಹೆಜ್ಜೆ ಹೆಜ್ಜೆಗೂ ದಹಿಸುತ್ತವೆ||
ಅವರಂತೆ ಆಗಲು ಆದರ್ಶ ವ್ಯಕ್ತಿಗಳು ಬದುಕಿಗೆ ದಾರಿ ದೀಪವಾಗಿ ಕಾಣುವರು|
ಮುಖವಾಡಗಳೇ ಹೀಗೆ ಹೆಮ್ಮೆಯಿಂದ ಬಣ್ಣ ಬದಲಾಯಿಸುತ್ತ ಮೆರೆಯುತ್ತವೆ||
ಪ್ರೀತಿಯ ಮಾತುಗಳು ಇದ್ದರೆ ಸಾಕು ಸಾಕಿದವರನ್ನೂ ನೂಕಿ ಬಿಡುತ್ತವೆ|
ದ್ವೇಷಗಳೇ ಹೀಗೆ ಒಲವಿನ ಹಿಂದೆ ಒಲೆ ಹೊತ್ತಿಸಿ ಕುದಿಸಿ ಕೇಕೆ ಹಾಕುತ್ತವೆ||
‘ಗಟ್ಟಿಸುತ’ ಬಟ್ಟಬಯಲು ಎಷ್ಟಿದ್ದರೇನು ಕಷ್ಟಗಳು ಕೈಕಾಲು ಕಟ್ಟಿ ಹಾಕುತ್ತವೆ|
ನಂಬಿಕೆಗಳೇ ಹೀಗೆ ನೆಚ್ಚಿಕೊಂಡದ್ದೇ ಚುಚ್ಚಿದರೂ ನಗುತ್ತಲೇ ಸಹಿಸಿಕೊಳ್ಳುತ್ತವೆ||
-ಎಂ.ಡಿ.ಬಾವಾಖಾನ ಸುತಗಟ್ಟಿ, ಮಲ್ಲಮ್ಮನ ಬೆಳವಡಿ
*****