“ಇದು ಈ ಇಳೆಯ ಅಪ್ಪಂದಿರ ಬದುಕಿನ ಬೇಗುದಿಗಳ ಕವಿತೆ. ಶಾಪಗ್ರಸ್ಥ ಅಪ್ಪಂದಿರ ಜೀವನ ವೈರುಧ್ಯಗಳ ವಿಷಾದದ ಭಾವಗೀತೆ. ಮನೆ-ಮಕ್ಕಳಿಗಾಗಿ ಎಲ್ಲವನ್ನೂ ಮಾಡಿಯೂ ಕಡೆಗಣಿಸಲ್ಪಡುವ, ಒಡಲಕುಡಿಗಳಿಂದಲೇ ಆಗುವ ಅಲಕ್ಷ್ಯ, ಅಪಮಾನಗಳನೆಲ್ಲ ಅವಡುಗಚ್ಚಿ ಸಹಿಸುವ ಅಪೂರ್ವ ಅಪ್ಪಂದಿರಿಗೆ ಅರ್ಪಿತ ಈ ಕವಿತೆ. ಇಂತಹ ಅಸಹಾಯಕ ಅಪ್ಪಂದಿರ ಕತೆ-ವ್ಯಥೆ ಇಂದಿಗೂ ಪ್ರಸ್ತುತ. ಅನುಭವಿಸಿದವರಿಗಷ್ಟೇ ಗೊತ್ತು ಈ ನೋವು, ಆಘಾತ…..ಎಂದು ಬರೆಯತ್ತಾರೆ ಕಾರವಾರದ ಕವಿ ಎ.ಎನ್.ರಮೇಶ್ ಗುಬ್ಬಿ ಅವರು ಈ ಕೆಳಗಿನ ಕವಿತೆಯಲ್ಲಿ 🍀👇🌺👇💐
ಶಾಪಗ್ರಸ್ಥ ಅಪ್ಪ..!
ಅಮ್ಮ ಪ್ರಸವ ವೇದನೆಯಲಿ ನೋವಿನಲಿ
ನರಳುತ್ತಿದ್ದರೆ ಹೆರಿಗೆಕೋಣೆಯ ಒಳಗೆ..
ಒಂದೆಡೆ ಕೂರದೆ ನಿಲ್ಲದೆ ಕಳವಳಿಸುತ್ತಿದ್ದ
ಅಪ್ಪ ಇದ್ದಬದ್ದ ದೇವರನೆಲ್ಲ ಜಪಿಸುತ್ತಿದ್ದ
ಕ್ಷಣಕ್ಷಣ ಜೀವವ ಹಿಡಿದು ಮುಷ್ಟಿಯಲಿ
ತಪಿಸಿ ಪರಿತಪಿಸಿ ಚಡಪಡಿಸುತ್ತಿದ್ದ ಹೊರಗೆ
ಸತಿಸುತರ ವಿಷಯದಿ ಮಹಾಪುಕ್ಕಲ ಅಪ್ಪ.!
ಹಗಲಿರುಳು ದುಡಿದು ಓದಿಸಿ ಬೆಳೆಸಿದ ಮಗ
ಮುಂದೊಂದು ದಿನ ಎಲ್ಲರೆದುರು ಕಡೆಗಣಿಸಿ
“ಜಾಸ್ತಿ ಓದಿಲ್ಲ ನನ್ನಪ್ಪ, ನನ್ನಷ್ಟು ತಿಳಿದಿಲ್ಲ..”
ಎಂದು ಮೂದಲಿಸುವಾಗ ಪೇಲವ ನಗೆನಕ್ಕು
ಜಗದೆದುರು ಮೂರ್ಖನಾಗುವ ಬೆಪ್ಪುತಕ್ಕಡಿ ಅಪ್ಪ.!
ಹೆಗಲಲ್ಲಾಡಿದ ಮಗನೇ ಹಗುರಾಗಿ ಕಾಣುವಾಗ
ಸಂಕಟ ನುಂಗಿಕೊಳ್ಳುವ ನಿಷ್ಪಾಪಿಜೀವ ಅಪ್ಪ.!
ಕೇಳಿ ಕೇಳಿದ್ದನ್ನೆಲ್ಲ ಕೊಡಿಸಿ ಮುದ್ದುಮಾಡಿ ಮೆರೆಸಿ
ಅಕ್ಷರಶಃ ರಾಜಕುಮಾರಿಯಂತೆ ಬೆಳೆಸಿದ ಮಗಳು..
ತಾನೇ ಕಣ್ಣಲ್ಲಿ ಎಣ್ಣೆ ಹಾಕಿ ಹುಡುಕಿದ ಸಿರಿವಂತರ
ಮನೆಗೆ ಸೊಸೆಯಾಗಿ ಹೋದಮೇಲೆ ಉಢಾಫೆಯಲಿ
“ನನ್ನ ಗಂಡನಷ್ಟು ದುಡ್ಡಿಲ್ಲ, ದುಡಿದಿಲ್ಲ ಬಡವ ನನ್ನಪ್ಪ”
ಎಂದಾಗ.. ಎತ್ತಾಡಿಸಿದ ಮನೆಮಗಳೇ ಎತ್ತಾಡುವಾಗ..
ಮೌನದಿ ಹಿಡಿಜೀವವಾಗುವ ಬಡಪಾಯಿ ಅಪ್ಪ.!
‘ಮಕ್ಕಳಿಗೆ ಆಸ್ತಿ ಮಾಡಬೇಡಿ ಮಕ್ಕಳನೇ ಆಸ್ತಿಮಾಡಿ’
ಎಂಬ ವೇದಾಂತಿಗಳ ನುಡಿ ಕೇಳಿ ಮಕ್ಕಳಿಗೆ ಹಾಗೆ
ಚೆಂದದ ಬದುಕು ಭವಿಷ್ಯ ಕೊಟ್ಟರೂ, ಕಡೆಗವರು..
“ನಮ್ಮಪ್ಪ ಹಣ ಜಮೀನು ಮಾಡದ ಮಹಾಉಡಾಳ’
ಎಂದು ಲೋಕಕೆಲ್ಲ ಸಾರುವಾಗ, ಹಂಗಿಸಿ ಆಡುವಾಗ
ಒಳಗೊಳಗೆ ಕುಗ್ಗಿ ಹೋಗುವ ಕನಿಷ್ಟದವನು ಅಪ್ಪ
ಎಲ್ಲ ಮಾಡಿ ಎಲ್ಲಿಯೂ ಸಲ್ಲದ ಶಾಪಗ್ರಸ್ಥ ತ್ರಿಶಂಕು ಅಪ್ಪ.!
ಮಾಡಿಟ್ಟಮನೆ, ಕೂಡಿಟ್ಟಹಣ ಹಂಚಿಕೊಂಡ ಮಕ್ಕಳು
ಅಗುಳಗುಳಿಗು ಲೆಕ್ಕಿಸುವಾಗ, ಅಡಿಗಡಿಗು ಹಳಿವಾಗ
ಅವಡುಗಚ್ಚುತ ಸಹಿಸಿಕೊಳ್ಳುವ ಅಸಹಾಯಕ ಅಪ್ಪ
ತಾ ಹೆತ್ತು ಹೊತ್ತ ಮಕ್ಕಳೇ, ತನ್ನನೇ ಹೊರೆಯೆಂದು
ಬೀದಿಪಾಲು ಮಾಡಿದಾಗ, ವೃದ್ದಾಶ್ರಮಕೆ ದೂಡಿದಾಗ
ಇಳಿವಯಸಿನಲಿ ಅಬ್ಬೆಪಾರಿಯಾಗುವ ಅಶಕ್ತ ಅಪ್ಪ
ಅಳುವುದ ಬಲ್ಲದ, ಅಳಲೊಲ್ಲದ ಆತ್ಮಾಭಿಮಾನಿ ಅಪ್ಪ.!
-ಎ.ಎನ್.ರಮೇಶ್ ಗುಬ್ಬಿ, ಕಾರವಾರ(ಜಿಲ್ಲೆ) —–