‘ಇನ್ನು ಮುಗಿಯಿತು ಅನ್ನುವಾಗ
ಶುರುವಾಗುತ್ತದೆ ಹೊಸ ಬದುಕು’
5 ವರ್ಷದವನಿದ್ದಾಗ ಆತನ ತಂದೆ ತೀರಿಕೊಂಡ.
16ನೇ ವಯಸ್ಸಿಗೆ ಆತ ಶಾಲೆ ಬಿಟ್ಟ.
17ನೇ ವಯಸ್ಸಿಗೆ ಆಗಲೇ ನಾಲ್ಕು ಕೆಲಸಗಳನ್ನಾತ ಕಳೆದುಕೊಂಡಿದ್ದ.
18ನೇ ವಯಸ್ಸಿಗೆ ಮದುವೆಯಾದ.
18ರಿಂದ 22 ವರ್ಷಗಳಲ್ಲಿ ಆತ ರೈಲ್ವೆ ಹಳಿ ನಿರ್ವಾಹಕನಾಗಿ ಕೆಲಸ ಮಾಡಿ ವಿಫಲನಾದ.
ಸೇನೆ ಸೇರಿದ ಆತ ಅಲ್ಲಿಂದಲೂ ಹೊರದೂಡಲ್ಪಟ್ಟ.
ಕಾನೂನು ಕಾಲೇಜಿಗೆ ಸೇರಲು ಬಯಸಿದನಾದರೂ ತಿರಸ್ಕರಿಸಲ್ಪಟ್ಟ.
ವಿಮೆ ಮಾರಾಟ ಪ್ರತಿನಿಧಿಯಾಗಿ ಕೆಲಸ ಮಾಡಲೆತ್ನಿಸಿ ಅಲ್ಲಿಯೂ ಸೋತ.
19ನೇ ವಯಸ್ಸಿಗೆ ತಂದೆಯಾದ.
20ನೇ ವಯಸ್ಸಿಗೆ ಆತನ ಹೆಂಡತಿ ಮಗಳನ್ನು ಕರೆದುಕೊಂಡು ಆತನನ್ನು ಬಿಟ್ಟುಹೋದಳು.
ಸಣ್ಣ ಕೆಫೆಯೊಂದರಲ್ಲಿ ಆತ ಅಡುಗೆಯವನಾಗಿ ಮತ್ತು ಪಾತ್ರೆ ತೊಳೆಯುವವನಾಗಿ ಕೆಲಸಕ್ಕೆ ಸೇರಿದ.
ತನ್ನ ಮಗಳನ್ನೇ ಅಪಹರಣ ಮಾಡಲೆತ್ನಿಸಿ ವಿಫಲನಾದ. ಕೊನೆಗೆ, ಹೆಂಡತಿಯನ್ನೊಪ್ಪಿಸಿ ತನ್ನೊಂದಿಗೆ ವಾಪಾಸ್ ಮನೆಗೆ ಕರೆತಂದ.
65ನೇ ವಯಸ್ಸಿಗೆ ಆತ ನಿವೃತ್ತನಾದ. ನಿವೃತ್ತಿಯ ದಿನ ಸರಕಾರದಿಂದ ಆತನಿಗೆ ಬಂದ ಚೆಕ್ ಮೊತ್ತ 105 ಡಾಲರ್ ಮಾತ್ರ.
ಇನ್ನು ಈ ವಿಫಲ ಬದುಕನ್ನು ಮುಂದುವರಿಸುವುದರಲ್ಲಿ ಯಾವುದೇ ಅರ್ಥ ಇಲ್ಲ ಎಂದು ಭಾವಿಸಿದ ಆತ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ.
ಮರವೊಂದರ ಕೆಳಗೆ ಕೂತು, ಉಯಿಲು ಬರೆಯಲು ಪ್ರಾರಂಭಿಸಿದ. ಆದರೆ, ಬರೆದಿದ್ದು, ತನ್ನ ಜೀವನದಲ್ಲಿ ತಾನು ಏನೆಲ್ಲ ಮಾಡಬಹುದಿತ್ತು ಎಂಬುದರ ಬಗ್ಗೆ.
ನಾನು ಇದುವರೆಗೆ ಮಾಡಿದ್ದಕ್ಕಿಂತ ಇನ್ನೂ ಎಷ್ಟೊಂದು ಕೆಲಸಗಳನ್ನು ಮಾಡಬಲ್ಲೆ ಎಂಬುದು ಆತನ ಅರಿವಿಗೆ ಬಂತು. ಅಡುಗೆ ಮಾಡುವ ವಿಷಯದಲ್ಲಿ ತನಗಿರುವ ಪ್ರಾವೀಣ್ಯತೆ ಇತರರಿಗಿಂತ ಹೆಚ್ಚಿರುವುದನ್ನು ಆತ ಮೊದಲ ಬಾರಿ ಕಂಡುಕೊಂಡ.
ಆದ್ದರಿಂದ, ತನಗೆ ಬಂದ ನಿವೃತ್ತಿ ವೇತನದಲ್ಲಿ 87 ಡಾಲರ್ ಬಳಸಿ, ಕೋಳಿಮಾಂಸ ತಂದ. ತಾನೇ ಅಭಿವೃದ್ಧಿಪಡಿಸಿಕೊಂಡ ವಿಧಾನ ಬಳಸಿ, ಅದನ್ನು ಹುರಿದು, ಕೆಂಟುಕಿಯ (ಅಮೆರಿಕದ ನಗರ) ಸುತ್ತಮುತ್ತಲಿನ ಪ್ರದೇಶಗಳ ಮನೆಮನೆಗೆ ಹೋಗಿ ಮಾರಿದ.
ನೆನಪಿಡಿ: ಆತ ತನ್ನ 65ನೇ ವಯಸ್ಸಿನಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದ. ಆದರೆ, ತನ್ನ 85ನೇ ವಯಸ್ಸಿನಲ್ಲಿ ಕರ್ನಲ್ ಸ್ಯಾಂಡರ್ಸ್ ಎಂಬ ಈ ವ್ಯಕ್ತಿ ಕೆಂಟುಕಿ ಫ್ರೈಡ್ ಚಿಕನ್ (ಕೆಎಫ್‌ಸಿ) ಎಂಬ ಬಹುರಾಷ್ಟ್ರೀಯ ಸಾಮ್ರಾಜ್ಯದ ಸ್ಥಾಪಕ ಹಾಗೂ ಶತ, ಸಹಸ್ರ (ಮಿಲಿಯನೇರ್) ಕೋಟ್ಯಾಧಿಪತಿ ಅನಿಸಿಕೊಂಡಿದ್ದ.
ಈ ನೈಜ ಪ್ರಕರಣದ ನೀತಿ ಇಷ್ಟೇ: ಯಾವುದನ್ನೇ ಆಗಲಿ ಹೊಸದಾಗಿ ಪ್ರಾರಂಭಿಸಲು ತಡ ಎಂಬುದಿಲ್ಲ;
ಮತ್ತು ಎಲ್ಲಕ್ಕಿಂತ ಮುಖ್ಯ, ಪ್ರತಿಯೊಂದು ಬೆಳವಣಿಗೆಯೂ ನಿಮ್ಮ ಧೋರಣೆಯನ್ನು ಅವಲಂಬಿಸಿರುತ್ತದೆ.
ಎಷ್ಟೇ ಸವಾಲುಗಳು ಬರಲಿ, ಎಷ್ಟೇ ಹಿನ್ನಡೆ ಉಂಟಾಗಲಿ, ನಿಮ್ಮ ಧೋರಣೆ ಬಿಡಬೇಡಿ. ಕೊನೆಗೆ ಅದೇ ನಿಮ್ಮ ಕೈ ಹಿಡಿದು ಗೆಲುವಿನೆಡೆ ಕರೆದೊಯ್ಯುತ್ತದೆ.
– ಚಾಮರಾಜ ಸವಡಿ, ಕೊಪ್ಪಳ
*****