ಋಣವೆಂಬುದದು ಎಷ್ಟು ಬಾಕಿ…
ಮನೆಯಮುಂದೆ
ನಾನು ಹಚ್ಚಿದ ಗಿಡ
ಬಹಳ ದಿನವೇನಾಗಿಲ್ಲ
ಬೆಳೆದು ನಿಂತಿದೆ ಮನೆಯುದ್ದ
ನಾನು ಹಚ್ಚಿದ..
ಎಂಬ ಪದ ಸರಿಯೇ ಎಂದು
ಸಾಕಷ್ಟು ಸಲ ಜಿಹ್ಞಾಸೆ..
ಯಾರೋ ಕೊಟ್ಟಿದ್ದ ಸಸಿ ತಂದು
ಭೂಮಿಯೊಳಗೆ ಊರಿದ್ದು ಮಾತ್ರ ನಾನೇ!
ಒಂದಿಷ್ಟು ಗೊಬ್ಬರ ,ತೆಳು ಮಣ್ಣು
ಇದಷ್ಟೇ ಸರಬರಾಜು..
ಆಗಾಗ ಒಂದಿಷ್ಟು ನೀರು
ಇದೆಲ್ಲ ನನ್ನ ಸ್ವಂತ ಫಸಲೇನಲ್ಲವಲ್ಲ
ಮತ್ತೆ ಗಿಡ ಬೆಳೆದದ್ದು
ಅದರೊಳಗಿನ ಶಕ್ತಿಯಿಂದ
ಅದಕ್ಕೂ ಮಿಗಿಲಾಗಿ
ಭೂಮಿಯೊಳಗಿನ ನೇಹದಿಂದ
ಇಂದು ಬೆಳೆದು ನಿಂತ ಗಿಡ
ಆಸರೆಯಾಗಿದೆ ನನಗೆ,
ನನ್ನ ಗಾಡಿಗಳಿಗೆ,ಮತ್ತು ಆಗಾಗ
ಬಂದು ನಿಲ್ಲುವ ಹಾದಿಬೀದಿಯ
ದಾರಿಹೋಕರಿಗೆ,
ನಿಲ್ಲುತ್ತಾರೆ,ತುಸು ಹೊತ್ತು ಬಿಸಿಲಲ್ಲಿ
ಬಳಲಿದವರು
ಯಾವಾಗಲೋ ಒಮ್ಮೆ
ಅರಳಿದ ಹೂವೋ
ಹುಲುಸಾದ ಚಿಗುರೋ
ವಗರಾದ ಕಾಯೊ
ಹರಿದು ಕಚ್ಚುತ್ತಾರೆ
ಹಚ್ಚಿದವನಿಗೆ ಪುಣ್ಯಬರಲಿ
ಅನ್ನುತ್ತಾರೆ..
ಒಳಗೇ ಇರುವ ನಾನು
ಪ್ರಶ್ನೇ ಹಾಕಿಕೊಳ್ಳುತ್ತೇನೆ
ಅಸಲು ಪುಣ್ಯ ಯಾರಿಗೆ..?
ಏನೇ ಇರಲಿ , ನೀರು ನೆಲವಿತ್ತುದಕ್ಕೆ
ಪ್ರತಿಯಾಗಿ ನೆರಳಿತ್ತ ಗಿಡ
ಬೆಳೆದು ನಿಂತಿದೆ
ಸಾಕ್ಷಿಯಾಗಿ
ನನ್ನ ಬಾಳಿಗೆ ನೀರೆರೆದ
ಸಾರ್ಥಕ ಬದುಕುಗಳ
ನೆನಪಿಸುತ್ತ,.ಪ್ರತಿಯಾಗಿ
ಏನೂ ಕೊಡಲಾಗದ
ನನ್ನ ಬಡತನವ ಅಣಕಿಸುತ್ತ..
-ಡಾ. ವೈ. ಎಂ. ಯಾಕೊಳ್ಳಿ , ಸವದತ್ತಿ
*****