ಅನುದಿನ ಕವನ-೯೧೦, ಕವಿಯಿತ್ರಿ: ಮಮತಾ ಅರಸೀಕೆರೆ, ಹಾಸನ ಜಿ.

೦೧.
ರಾತ್ರಿ ಕಣ್ಣಿರಲ್ಲಿ ಒದ್ದೆಯಾಗುವ ಹಾಸಿಗೆ
ಅಂಗೈಯಲ್ಲಿ ಬೆಚ್ಚಗಿದ್ದು
ಆಗಾಗ್ಗೆ ನೆನೆಯುವ ವಸ್ತ್ರ
ತನಗೊರಗಿಸಿಕೊಂಡು
ಸಾಂತ್ವನಿಸುವ ಗೋಡೆ
ಕಣ್ತುಂಬಿ ಹಸಿಯಾಗುವ
ರೆಪ್ಪೆಗಳು
ಏನೆಲ್ಲಾ ಕಥೆ ಹೇಳಿಬಿಡುತ್ತಿದ್ದವೇನೋ
ಎಷ್ಟೆಲ್ಲಾ ರಂಗು ಹಚ್ಚಿಕೊಳ್ಳುತ್ತಿತ್ತೇನೋ
ಅಬ್ಬಾ ! ಸದ್ಯ
ಕಣ್ಣೀರಿಗೆ ಯಾವ ಬಣ್ಣವೂ ಇಲ್ಲ..

೦೨.
ಹಗಲಿನ ಬೆಳಕಿಗಿಂತ
ಕತ್ತಲ ಆಪ್ತತೆಗೆ ಹತ್ತಿರವಾಗಿದ್ದೇನೆ
ಹೂವಿನ ಸೊಬಗಿಗಿಂತ
ಮುಳ್ಳಿನ ಕಠಿಣತೆಗೆ ಕರಗಿದ್ದೇನೆ
ಧಗಧಗಿಸುವ ಬೆಂಕಿಗಿಂತ
ಸುಟ್ಟುಕೊಳ್ಳುವ ಪತಂಗವಾಗಿದ್ದೇನೆ
ಕನಸಿನ ಬಣ್ಣಗಳಿಗಿಂತ
ವಾಸ್ತವದ ನೆಲೆಯಲ್ಲಿದ್ದೇನೆ
ನಾಶವಾಗದ ಅತೃಪ್ತಿಗಿಂತ
ಜೀವಂತ ಪ್ರತಿಮೆಯಾಗಿದ್ದೇನೆ
ಆಕಾಶದ ನಕ್ಷತ್ರಕ್ಕಿಂತ
ಕೈಗೆಟಕುವ ದಡವಾಗಿದ್ದೇನೆ
ಸ್ತಬ್ಧವಾಗುವ ಉಸಿರಿಗಿಂತ
ಸದಾ ಮಿಡಿಯುವ ಮನವಾಗಿದ್ದೇನೆ


-ಮಮತಾ ಅರಸೀಕೆರೆ, ಹಾಸನ ಜಿ.
*****