ಬಳ್ಳಾರಿ, ಜು.2: ದುಡ್ಡು, ಆಸ್ತಿ ಮಾಡಲು ರಾಜಕೀಯಕ್ಕೆ ಬಂದಿಲ್ಲ. ಕಟ್ಟಕಡೆಯ, ಬಡ, ಶೋಷಿತ ಜನರ ಕಣ್ಣೀರು ಒರೆಸುವುದು ನನ್ನ ಆದ್ಯತೆ ಎಂದು ಕಾಪು ವಿಧಾನ ಸಭಾ ಕ್ಷೇತ್ರದ ನೂತನ ಶಾಸಕ ಗುರ್ಮೆ ಸುರೇಶ ಶೆಟ್ಟಿ ಅವರು ಹೇಳಿದರು.
ನಗರದ ತುಂಗಭದ್ರಾ ಬಂಟರ ಸಂಘ ಸ್ಥಳೀಯ ಬಂಟ್ಸ್ ಸಭಾಂಗಣದಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ನನ್ನನ್ನು ಸಾಕಿ ಸಲುಹಿದ ಬಳ್ಳಾರಿ ಮತ್ತು ಕಾಪುವಿನ ಮತದಾರರ ನಂಬಿಕೆ, ವಿಶ್ವಾಸ ಉಳಿಸಿಕೊಳ್ಳುತ್ತೇನೆ ಎಂದು ತಿಳಿಸಿದರು.
ಕಾಪುವಿನಲ್ಲಿ ಎಲ್ಲಾ ಜಾತಿ, ಧರ್ಮದವರು ತಮ್ಮನ್ನು ಬೆಂಬಲಿಸಿದ್ದಾರೆ. ನನ್ನ ಸಮುದಾಯದ ಬಂಟರು ಇರುವುದು ಕೇವಲ 20 ಸಾವಿರ ಮಾತ್ರ ಆದರೆ 80ಸಾವಿರಕ್ಕೂ ಹೆಚ್ಚು ಮತ ನೀಡಿ ಬೆಂಬಲಿಸಿದ್ದಾರೆ ಎಂದು ಹೇಳಿದರು.
ನನ್ನ ಕರ್ಮಭೂಮಿ ಬಳ್ಳಾರಿಯಲ್ಲಿ ಯೋಗ್ಯತೆಗೆ ಮೀರಿ ಗೌರವಿಸಿದಿರಿ. ಅನ್ನ ಅರಿವೆ ಆಶ್ರಯ ಕೊಟ್ಟ ಊರು ಬಳ್ಳಾರಿ. ನಾನು ಎಂದಿಗೂ ಋಣ ತೀರಿಸದ ಊರು ಬಳ್ಳಾರಿ ಎಂದು ಭಾವುಕರಾದರು.
ಎಪಿಎಂಸಿ ಹಮಾಲರ ಸಂಘದ ಅಧ್ಯಕ್ಷ ಉಪಾಧ್ಯಕ್ಷರಾಗಿದ್ದ ಪತ್ರಕರ್ತ ರವಿ ಬೆಳಗೆರೆ ಮತ್ತು ಡಿ. ಯರಿಸ್ವಾಮಿ ಅವರ ಜತೆಯಲ್ಲಿ ತಾವು ಪದಾಧಿಕಾರಿಯಾಗಿ ಹೋರಾಟ ಮಾಡಿದ್ದು ಅವಿಸ್ಮರಣೀಯ. ಮೂರು ದಶಕಗಳ ಹಿಂದಿನ ಹೋರಾಟ, ಬದುಕು ಪ್ರಸ್ತುತ ಜನಪ್ರತಿನಿಧಿಯಾಗಿ ಆಯ್ಕೆಯಾಗಲು ಕಾರಣವಾಗಿದೆ ಎಂದರು.
ತೊಂಬತ್ತರ ದಶಕದಲ್ಲಿ ಬಳ್ಳಾರಿಯಲ್ಲಿ ಹವ್ಯಾಸಿ ಕಲಾ ಸಂಘವನ್ನು ಆರಂಭಿಸಿದ್ದು, ಒಡನಾಟವನ್ನು ಪ್ರೀತಿಯಿಂದ ನೆನಪಿಸಿದರು.
ಮುಖ್ಯ ಅತಿಥಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು ಮಾತನಾಡಿ, ಕೊಡುಗೈ ದಾನಿ ಸುರೇಶ ಶೆಟ್ಟಿ ಅವರು ಜನರ ಕಷ್ಟದಲ್ಲಿ ಸದಾ ಭಾಗಿಯಾಗಿರುತ್ತಿದ್ದರು. ಬಡವರ ಕಣ್ಣೀರು ಒರೆಸಿದವರು. ಜಾತ್ಯಾತೀತ ನಾಯಕ ಎಂದು ಶ್ಲಾಘಿಸಿದರು. ಪಿತೃ ಸಮಾನರಾದ ಸುರೇಶ ಶೆಟ್ಟಿ ಅವರು ಕಾಪು ಬದಲು ಬಳ್ಳಾರಿಯಲ್ಲಿ ಸ್ಪರ್ಧಿಸಿದ್ದರೆ ನನಗೆ ಕಷ್ಟವಾಗುತ್ತಿತ್ತು ಎಂದು ಹೇಳಿದರು.
ಸುರೇಶ ಶೆಟ್ಟಿ ಅವರು ನನ್ನನ್ನು ಎತ್ತಿ ಆಡಿಸಿದವರು, ತಂದೆ ಸಮಾನರು ನನ್ನ ತಂದೆ ತಾಯಿ ಪುಣ್ಯವೇನೋ ಇವರನ್ನು ಸನ್ಮಾನಿಸುವ ಪುಣ್ಯ ನನ್ನದಾಗಿದೆ ಎಂದು ಗದ್ಗಿತರಾದರು.
ಬೈಂದೂರು ಶಾಸಕ ಗುರುರಾಜ ಗಂಟಿಹೊಳಿ ಅವರು ಮಾತನಾಡಿ, ನಾನು ಆಕಸ್ಮಿಕವಾಗಿ ಶಾಸಕನಾದೆ. ತಾವು
ಸೋತು ಸುಣ್ಣವಾಗಿದ್ದಾಗ ಬಂದು ಧೈರ್ಯ ತುಂಬಿದವರು ಸುರೇಶ್ ಶೆಟ್ಟಿ ಅವರು ಎಂದರು.
ಮಾಜಿ ಶಾಸಕ ಜಿ.ಸೋಮಶೇಖರ ರೆಡ್ಡಿ ಮಾತನಾಡಿ, ಜನಾನುರಾಗಿ ಸುರೇಶ ಶೆಟ್ಟಿ ಹಿಂದಿನಬಾರಿಯೇ ಶಾಸಕರಾಗಬೇಕಿತ್ತು. ಮುಂಬರುವ ದಿನಗಳಲ್ಲಿ ಉನ್ನತ ಪದವಿಗೆ ಏರಲಿ ಎಂದು ಹಾರೈಸಿದರು.
ಮುಖ್ಯ ಅತಿಥಿಯಾಗಿದ್ದ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಶ್ರೀನಿವಾಸ್ ರಾವ್ ಅವರು,
ಬಂಟ ಸಮುದಾಯ ಸ್ನೇಹಶೀಲರು. ದಕ್ಷತೆಯಿಂದ ಪ್ರಗತಿ ಹೊಂದಿದ ಸಮುದಾಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ತುಂಗಭದ್ರಾ ಬಂಟರ ಸಂಘದ ಅಧ್ಯಕ್ಷ ಡಾ.ಮಾಧವ ಶೆಟ್ಟಿ ಮಾತನಾಡಿದರು.
ಬಳ್ಳಾರಿ ಪಾಲಿಕೆ ಡೆಪ್ಯೂಟಿ ಮೇಯರ ಜಾನಕಮ್ಮ,
ಚೇಂಬರ್ ಆಫ್ ಕಾಮರ್ಸ್ ಮಾಜಿ ಅಧ್ಯಕ್ಷ ಡಾ.ಡಿ. ಎಲ್. ರಮೇಶ್, ಹೊಟೇಲ್ ಮಾಲೀಕರ ಸಂಘದ ಅಧ್ಯಕ್ಷ ಮಯೂರ ಮಧುಸೂಧನ್, ಸಂಘದ ಕಾರ್ಯದರ್ಶಿ ಸೂರ್ಯಕುಮಾರ್ ಶೆಟ್ಟಿ, ಉಪಾಧ್ಯಕ್ಷರಾದ
ಹರೀಶ್ ಶೆಟ್ಟಿ, ಜಯದೀಪ್ ಹೆಗಡೆ, ಸಂಘದ ಸಲಹಾ ಸಮಿತಿ ಸಂಚಾಲಕ ಗುರ್ಮೆ ಸತೀಶ್ ಪಿ ಶೆಟ್ಟಿ ಮತ್ತಿತರ ಗಣ್ಯರು ವೇದಿಕೆಯಲ್ಲಿ ಇದ್ದರು.
ಮೂರು ದಶಕಗಳ ಹಿಂದೆ ಒಡನಾಟವಿದ್ದ ಹಮಾಲರ ಸಂಘದ ಪದಾಧಿಕಾರಿಗಳನ್ನು ಅಂದಿನ ತಮ್ಮ ಹೊಟೇಲಿನ ಕಾರ್ಮಿಕರನ್ನು ಸುರೇಶ್ ಶೆಟ್ಟಿ ಸನ್ಮಾನಿಸಿ ಗೌರವಿಸಿದ್ದು ಗಮನ ಸೆಳೆಯಿತು.
ಬಳಿಕ ನಗರದ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸುರೇಶ್ ಶೆಟ್ಟಿ ಅವರನ್ನು ಸತ್ಕರಿಸಿ ಗೌರವಿಸಿದರು.
ಆಕರ್ಷಿಸಿದ ಹಾಡು ನೃತ್ಯ: ಹದಿನೈದು ವರ್ಷದ ಬಳಿಕ ನಗರದಲ್ಲಿ ಸುರೇಶ ಶೆಟ್ಟಿ ಅವರು ಹಾಡಿದರು. ಹವ್ಯಾಸಿ ಕಲಾ ಸಂಘದ ಪದಾಧಿಕಾರಿಗಳು, ಸದಸ್ಯರ ಜತೆ ಜನಪ್ರಿಯ ಹಾಡುಗಳನ್ನು ಹಾಡಿದರು.
ಇವರ ಹಾಡಿಗೆ ಸಭಿಕರು, ಸಂಘದ ಸದಸ್ಯರು ಹೆಜ್ಜೆ ಹಾಕಿದರು. ಸಂಗೀತಗಾರರಾದ ಸುಂದರ್, ಫ್ರಾನ್ಸಿಸ್, ಕಾಳಿದಾಸ್, ಡಾ. ಶ್ರೀನಿವಾಸರೆಡ್ಡಿ, ಮಿಮಿಕ್ರಿ ಕಲಾವಿದ ಕಾಳಿದಾಸ್, ಜಿ. ಸತೀಶ್ ಪಿ ಶೆಟ್ಟಿ, ಪ್ರಶಾಂತ್ ಶೆಟ್ಟಿ ಮತ್ತಿತರರು ಇದ್ದರು.
ಸಂಘದ ಖಜಾಂಚಿ ಶಾಂತರಾಮ ಶೆಟ್ಟಿ ಸ್ವಾಗತಿಸಿದರು. ಡಾ.ಶ್ರೀನಿವಾಸ ರೆಡ್ಡಿ ಅವರು ಪರಿಚಯಿಸಿದರು. ಜಡೇಶ್ ಎಮ್ಮಿಗನೂರು ಪ್ರಾರ್ಥಿಸಿದರು. ಸಂಘದ ಉಪಾಧ್ಯಕ್ಷ ಹರೀಶ್ ಶೆಟ್ಟಿ ವಂದಿಸಿದರು. ಇಂಜಿನಿಯರ್ ಎಂ. ವಿನೋದ್ ನಿರೂಪಿಸಿದರು
*****