ಯಾರಿಗ್ಗೊತ್ತು ?
ಯಾರಿಗ್ಗೊತ್ತು ?
ನಾಳೆ ನಾನು
ಯಾವುದೋ ಚಿಟ್ಟೆಯ
ಮೊಟ್ಟೆಯಾಗಿ
ಮರಿ ಕಂಬಳಿಹುಳುವಾಗಿ
ರೆಕ್ಕೆಯರಳಿಸಿ ನಿಮ್ಮ
ತೋಟದ ಅಂಗಳದಲ್ಲೇ
ಹಾರಾಡಬಹುದು
ಯಾರಿಗ್ಗೊತ್ತು ?
ನಾಳೆ ನಾನು
ಹನಿಯಾಗಿ
ಮೋಡದೊಳಗೆ ಸೇರಿ
ಮಳೆ ಹನಿಯಾಗಿ
ನಿಮ್ಮನ್ನು ತೋಯಿಸಿ
ಹಿತ ನೀಡಬಹುದು
ಯಾರಿಗ್ಗೊತ್ತು ?
ನಾಳೆ ನಾನು
ಮಣ್ಣಲ್ಲಿ ಕರಗಿ ಮಣ್ಣಾಗಿ
ಹಸಿರು ಚಿಗುರಿನ ಹುಲ್ಲಾಗಿ
ನಿಮ್ಮ ಪಾದಗಳಿಗೆ
ಮುದ ನೀಡಬಹುದು
ಯಾರಿಗ್ಗೊತ್ತು ?
ನಾಳೆ ನಾನು
ನಭಕ್ಕೆ ನೆಗೆದು
ಚಿಕ್ಕೆಗಳಲ್ಲೊಂದು
ಚಿಕ್ಕೆಯಾಗಿ
ಇರುಳಾದೊಡನೆ
ನಿಮ್ಮ ಮುಗುಳ್ನಗೆಗೆ
ಕಾರಣವಾಗಬಹುದು
ಯಾರಿಗ್ಗೊತ್ತು ?
ಏನಿಲ್ಲವೆಂದರೂ
ಕೊನೆಗೆ –
ನಾಳೆ ನಾನು
ಇಲ್ಲದಾದಾಗ
ಈ ಕವಿತೆಯನ್ನೋದಿ
ನಿಮ್ಮ ಕಂಗಳ
ಎರಡು ಕಂಬನಿಯೂ
ಆಗಬಹುದು !
-ಸಿದ್ಧರಾಮ ಕೂಡ್ಲಿಗಿ, ವಿಜಯನಗರ ಜಿ. [ಚಿತ್ರಕೃಪೆ: ಯಜ್ಞ ಆಚಾರ್ಯ(ಮೋಡ)]
*****