ನನಗೆ ಮರೆವು ಹೆಚ್ಚಾಗಿದೆ..
‘ನನಗೆ ಇತ್ತೀಚೆಗೆ ಮರೆವು ಹೆಚ್ಚಾಗಿದೆ’
ಎಂದು ನನಗೆ ನಾನೇ ದಿನಕ್ಕೆ
ನೂರು ಬಾರಿ ಹೇಳಿಕೊಂಡಿದ್ದೇನೆ.
ತುರ್ತಾಗಿದ್ದನ್ನು ಎಡಗೈಲಿ ಎಲ್ಲೋ ಇಟ್ಟು
ಊರೆಲ್ಲಾ ಹುಡುಕುವುದು
ಯಾರದೋ ಮಾಹಿತಿ ಯಾರಿಗೋ ತಲುಪಿಸಿ
ಪೇಚಾಡುವುದು
ಇರುವ ವಿಷಯವ ಬಿಟ್ಟು
ಮಿಕ್ಕದ್ದನ್ನು ಒದರಿ ಬೆತ್ತಲಾಗಿದ್ದೇನೆ.
ನೆನ್ನೆ ಮಾತಾಡಿಸಿದವರನ್ನು ಮರೆತು
‘ಎಲ್ಲೋ ನೋಡಿದ ಹಾಗಿದೆ’ ಎಂದು
ತಲೆ ಕೆರೆದುಕೊಳ್ಳುವುದು
ಕೊಟ್ಟದ್ದು ಮರೆತು ಕೋಡಂಗಿಯಾಗಿ
ಪಡೆದದ್ದು ಕೇಳಿ ಬೈಗುಳವ ತಿಂದು
ಭರಪೂರ ಬೆವೆತಿದ್ದೇನೆ.
ಬರೆದಿಟ್ಟುಕೊಂಡ ಅಂಗಡಿಯ ಚೀಟಿ
ಎಲ್ಲೋ ಬಿಟ್ಟು, ಸಿಕ್ಕಿದ್ದನ್ನು ಹೊತ್ತು ತರುವುದು
ನಡೆದೇ ಇದೆ.
ಕಣ್ಣಲ್ಲೇ ಕೋಪವಿದ್ದರೂ ಹೆಂಡತಿ
ಬಿಟ್ಟುಕೊಡುವುದಾದರೂ ಹೇಗೆ ?
ತಪ್ಪದೇ ಹೇಳುವಳು
‘ಅವರಿರುವುದೇ ಹಾಗೇ ‘
ಜಾಣೆಯಾಕೆ …
‘ಪಾಪ, ವಯಸ್ಸಾಗಿದೆ.’
ಎಂದು ಮರುಕ ತೋರುವ ಮಂದಿ
ಪಕ್ಕನೆ ನಗುವುದು ಕಿವಿಗೆ ಬೀಳುತ್ತದೆ.
ನೆರೆತ ತಲೆಗೂದಲು,
ಮಬ್ಬು ತುಂಬಿದ ಕಣ್ಣು,
ಸೊಂಟದ ಛಳಕು
ನನಗೆ ವಯಸ್ಸಾಗಿದೆಯೆಂದು
ಎಂದೋ ಸಾರಿಯಾಗಿದೆ.
ಕಣ್ಣ ಮಂಜಿಗೊಂದು ಕನ್ನಡಕ
ಕಿವಿಯ ಪೋಟಿಗೆಂದು ಮೆಷೀನು
ಕೊಂಡು ಸರಿದೂಗಿಸಲುಂಟು
ಮರೆವಿಗೆಲ್ಲಿದೆ ಮದ್ದು, ಸಿದ್ಧೌಷದಿ ?
‘ ನನಗೆ ಇತ್ತೀಚೆಗೆ ಮರೆವು ಹೆಚ್ಚಾಗಿದೆ’
ಎಂದು ನಾನೇ ಘೋಷಿಸಿಕೊಂಡು
ಎಲ್ಲವನ್ನೂ ಮರೆತು ನಿರಾಳಾಗಿದ್ದೇನೆ
ಮತ್ತು ಮೊದಲಿಗಿಂತಲೂ ಹೆಚ್ಚು ಖುಷಿಯಲ್ಲಿದ್ದೇನೆ..
-ಮಧುಸೂದನ್ ಬೆಳಗುಲಿ, ಮಡಿಕೇರಿ
*****