‘ಸುಜ್ಞಾನ’ ದೆಡೆಗೆ ಕರೆದೊಯ್ದ ‘ಮೂರ್ತಿ’ -ಸ್ವಾನ್ ಕೃಷ್ಣಮೂರ್ತಿ, ಬೆಂಗಳೂರು

ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗದ ನಿವೃತ್ತ ಉಪನಿರ್ದೇಶಕರೂ ಹೆಸರಾಂತ ಅನುವಾದಕ ಬಿ.ಸುಜ್ಞಾನಮೂರ್ತಿ ಅವರು ಇಂದು
ತಮ್ಮ 63ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.
ಮೂರು ವರ್ಷಗಳ‌ ಹಿಂದೆ ವಯೋ ನಿವೃತ್ತಿಯಾದ ಸಂದರ್ಭದಲ್ಲಿ ನಾಡಿನ ಪ್ರಸಿದ್ಧ ಮುದ್ರಕರಲ್ಲಿ ಒಬ್ಬರಾದ ಸ್ವಾನ್ ಕೃಷ್ಣಮೂರ್ತಿ ಅವರು ಸುಜ್ಞಾನ ಮೂರ್ತಿ ಅವರ ಕುರಿತು ಹಂಚಿಕೊಂಡಿದ್ದ ಮನದಾಳದ ಮಾತುಗಳನ್ನು ಪ್ರಕಟಿಸುವುದರ ಮೂಲಕ ಕರ್ನಾಟಕ ಕಹಳೆ ಡಾಟ್ ಕಾಮ್ ಸುಜ್ಞಾನಮೂರ್ತಿ ಅವರಿಗೆ  ಜನುಮದಿನದ ಶುಭಾಶಯಗಳನ್ನು ಕೋರುತ್ತಿದೆ.                 (ಸಂಪಾದಕರು)
🍀🎂🌺💐👇

‘ಸುಜ್ಞಾನ’ ದೆಡೆಗೆ ಕರೆದೊಯ್ದ ‘ಮೂರ್ತಿ’

ಗುರುವೆಂದರೆ ವ್ಯಕ್ತಿಯಲ್ಲ, ಒಂದು ಶಕ್ತಿ. ಅಜ್ಞಾನದ ಕತ್ತಲೆಯ ಕಳೆದು ಸುಜ್ಞಾನದ ಬೆಳಕಿನೆಡೆಗೆ ಕರೆದುಕೊಂಡು ಹೋಗುವ ಜ್ಞಾನಿಯೇ ಗುರು…

ಪುಸ್ತಕ ವಿನ್ಯಾಸ, ಬೈಂಡಿಂಗ್‌ಗೆ ಬಳಸುವ ಕಾಗದ, ಮುಖಪುಟಗಳಲ್ಲಿ ಬಣ್ಣಗಳ ಹೊಂದಾಣಿಕೆ ಇತ್ಯಾದಿ ಮುದ್ರಣ ಸಂಬಂಧಿ ತಿಳುವಳಿಕೆಯನ್ನು ನೀಡುವುದರ ಜೊತೆಗೆ ನನ್ನ ಕನ್ನಡ ಪ್ರಜ್ಞೆಯನ್ನು ವಿಸ್ತರಿಸಿದವರು ಹಂಪಿ ಕನ್ನಡ ವಿಶ್ವವಿದ್ಯಾಲಯದ ಬಿ. ಸುಜ್ಞಾನಮೂರ್ತಿ. ಇವರೊಂದಿಗೆ ಕಳೆದ ಎಲ್ಲಾ ಕ್ಷಣಗಳು ನನಗೆ ಮುದ್ರಣದ ಮುಖ್ಯ ಪಾಠಗಳಾಗಿವೆ.

ಮನುಷ್ಯರ ಜೀವನದಲ್ಲಿ ಹಲವು ಘಟನೆಗಳು, ಸಂಬಂಧಗಳು ಅನಿರೀಕ್ಷಿತವಾಗಿ ಸಂಭವಿಸುತ್ತವೆ. ಹೀಗೆ ನಿಮಿತ್ತವಿಲ್ಲದೆ ನಡೆಯುವ ಘಟನೆಗಳು ಆಶ್ಚರ್ಯವನ್ನೂ ಬೆರಗನ್ನೂ ಹುಟ್ಟಿಸುತ್ತವೆ. ಬದುಕಿನಲ್ಲಿ ಬಹಳ ಕಾಲ ಉಳಿಯುತ್ತವೆ, ನಂತರ ಜೀವನ ಮುಗಿದ ಮೇಲೆ ನೆನಪಿನಲ್ಲಿಯೂ..!

ನಾನು ಲಕ್ಷ್ಮಿ ಮುದ್ರಣಾಲಯ ಸೇರಿದ ಹೊಸದರಲ್ಲಿ ಸುಜ್ಞಾನಮೂರ್ತಿಯವರು ಕಚೇರಿಯಲ್ಲಿ ಕುಳಿತು ವಿಶ್ವವಿದ್ಯಾಲಯದ ಒಂದು ಪುಸ್ತಕದ ಕರಡು ತಿದ್ದುತ್ತಿದ್ದರು. ಅವರು ಕರಡು ತಿದ್ದುವುದನ್ನು ನಾನು ತದೇಕ ಚಿತ್ತದಿಂದ ಗಮನಿಸುತ್ತಿದ್ದೆ. ಅವರು ಪುಟಗಳಲ್ಲಿ ತಪ್ಪುಗಳನ್ನು ಗುರುತಿಸಲು ಬಳಸುತ್ತಿದ್ದ ಚಿಹ್ನೆಗಳನ್ನು ಕಂಡು ಸೋಜಿಗಗೊಳ್ಳುತ್ತಿದ್ದೆ. ಆ ಚಿಹ್ನೆಗಳ ಬಗ್ಗೆ ಕುತೂಹಲ ಮೂಡಿ ಅವರ ಬಳಿ ಅವುಗಳ ಅರ್ಥವೇನೆಂದು ಕೇಳಿದೆ. ಆಗ ಅವರು ಬಿಳಿ ಹಾಳೆಯ ಮೇಲೆ ಒಂದೊಂದೇ ಚಿಹ್ನೆಗಳನ್ನು ಬರೆದು ನನ್ನ ಮನಮುಟ್ಟುವಂತೆ ಅವುಗಳ ಅರ್ಥವನ್ನು ಹೇಳಿ ಬರೆದುಕೊಟ್ಟರು. ನನಗೆ ಅಂದೇ ಗೊತ್ತಾಗಿದ್ದು ಕರಡು ತಿದ್ದುವುದು ಒಂದು ಕಲೆಯೆಂದು..! ಅಂದಿನಿಂದ ಶುರುವಾದ ಗುರು-ಶಿಷ್ಯರ ನಮ್ಮ ಸಂಬಂಧ ೨೫ ವರ್ಷ ಕಳೆದು ಇಂದಿಗೂ ಮುಂದುವರೆದಿದೆ. ನನಗೆ ಕರಡು ತಿದ್ದುವ ‘ಪರಿಪಾಠ’ ಕಲಿಸಿದ ಮೊದಲ ಮೇಷ್ಟ್ರು, ನನ್ನನ್ನು ಸುಜ್ಞಾನದೆಡೆಗೆ ಕರೆದೊಯ್ದ ಅನೇಕ ಗುರುಗಳಲ್ಲಿ ಸುಜ್ಞಾನಮೂರ್ತಿ ಅವರೂ ಒಬ್ಬರು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ.

ಒಂದು ಪುಸ್ತಕ ಮುದ್ರಣವಾಗಿ ಕೆಲವು ತಿಂಗಳುಗಳು ಕಳೆದ ಮೇಲೆ ಬಿಡುಗಡೆ ಕಾರ್ಯಕ್ರಮವನ್ನು ಲೇಖಕರು ಹಮ್ಮಿಕೊಂಡಿದ್ದರು. ಪುಸ್ತಕ ಬಿಡುಗಡೆಗೆ ಖ್ಯಾತ ಸಾಹಿತಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಯು.ಆರ್. ಅನಂತಮೂರ್ತಿಯವರು ಆಗಮಿಸಿದ್ದರು. ಅತಿಥಿಗಳು ಎಲ್ಲರೂ ಬಂದಮೇಲೆ ಅವರನ್ನೆಲ್ಲ ಇನ್ನೇನು ವೇದಿಕೆ ಹತ್ತಿಸಬೇಕು, ಆಯೋಜಕರು ಆಗ ನೋಡಿಕೊಳ್ಳುತ್ತಾರೆ- ಪುಸ್ತಕಗಳು ಬಣ್ಣದ ಕಾಗದದಲ್ಲಿ ಬಿಡುಗಡೆಗೆ ಸಿದ್ಧವಾಗಿಲ್ಲವೆಂದು…! ಆಗ ಎಲ್ಲರೂ ಒತ್ತಡದಲ್ಲಿದ್ದರು. ಕಾರ್ಯಕ್ರಮ ಸ್ವಲ್ಪ ತಡವಾಗಿ ಪ್ರಾರಂಭ ಮಾಡೋಣ, ಅಷ್ಟರಲ್ಲಿ ಯಾವುದಾದರೂ ಪುಸ್ತಕದಂಗಡಿಗೆ ಹೋಗಿ ಬಣ್ಣದ ಕಾಗದವನ್ನು ಹುಡುಕಿಸಿ ತರೋಣ ಎಂದು ಮಾತಾಡುತ್ತಿರುವಾಗಲೇ, ಪರಿಸ್ಥಿತಿಯನ್ನು ಅರಿತ ಸುಜ್ಞಾನಮೂರ್ತಿಯವರು ಅಲ್ಲಿಗೆ ಬಂದರು. ಅಲ್ಲೇ ಇದ್ದ ಬಿಳಿಹಾಳೆಗಳನ್ನು ಸುತ್ತಿ, ಫ್ಲೆಕ್ಸ್ ಕಟ್ಟಲು ಬಳಸಿದ್ದ ಬಣ್ಣದ ದಾರದಿಂದ ಕಟ್ಟಿ ಪುಸ್ತಕಗಳನ್ನು ಬಿಡುಗಡೆಗೆ ಸಿದ್ಧಪಡಿಸಿಯೇಬಿಟ್ಟರು…! ಸಂಕಷ್ಟ ಪರಿಸ್ಥಿತಿಯಿಂದ ಪಾರುಮಾಡುವ ಇಂಥ ಹಲವು ಸರಳ ಉಪಾಯಗಳು ಇವರ ಬತ್ತಳಿಕೆಯಿಂದ ಪ್ರಯೋಗವಾಗಿರುವುದನ್ನು ಹಲವು ಕ್ಲಿಷ್ಟಕರ ಸಂದರ್ಭಗಳಲ್ಲಿ ನಾನು ಕಣ್ಣಾರೆ ಕಂಡಿದ್ದೇನೆ.

ಸುಜ್ಞಾನಮೂರ್ತಿ ಪ್ರತಿ ಬಾರಿ ಭೇಟಿಯಾದಾಗಲೂ ಪುಸ್ತಕ ಮತ್ತು ಆಹ್ವಾನ ಪತ್ರಿಕೆಗಳಲ್ಲಿ ಕರಡು ದೋಷದಿಂದ ಆಗುವ ತೊಂದರೆಗಳನ್ನು ಹಾಸ್ಯಭರಿತವಾಗಿ ಹೇಳಿ ಸ್ವಲ್ಪ ಎಚ್ಚರ ತಪ್ಪಿದರೂ ಸಣ್ಣಪುಟ್ಟ ತಪ್ಪುಗಳಿಂದ ಹೇಗೆ ದೊಡ್ಡಮಟ್ಟದ ನಷ್ಟವಾಗುತ್ತದೆ ಎಂಬುದನ್ನು ನನ್ನ ಮನಸ್ಸಿನಲ್ಲಿ ಉಳಿಯುವಂತೆ ಮಾಡಿದ್ದಾರೆ. ವಿಶ್ವ ಪುಸ್ತಕ ಮಾರುಕಟ್ಟೆಯ ಇಂಗ್ಲಿಷ್ ಪುಸ್ತಕಗಳಲ್ಲಿ ದಿನದಿಂದ ದಿನಕ್ಕೆ ಆಗುತ್ತಿರುವ ಬದಲಾವಣೆಗಳನ್ನು ಸದಾ ಗಮನಿಸುವ ಅವರು ಅಂತಹ ಪುಸ್ತಕಗಳನ್ನು ತಂದು ಅವುಗಳ ಗುಣಮಟ್ಟವನ್ನು ವಿವರಿಸುತ್ತಲೇ ಇರುತ್ತಾರೆ.

ಕನ್ನಡ ಸಾಹಿತ್ಯಲೋಕದಲ್ಲಿ ಕರಡು ತಿದ್ದುವ ಶ್ರೇಷ್ಠ ಪರಿಣತರಲ್ಲಿ ಇವರೂ ಒಬ್ಬರು. ಇವರು ಹಸ್ತಪ್ರತಿಯನ್ನು ಅಕ್ಷರ ಸಂಯೋಜಿಸಿ, ಕರಡು ತಿದ್ದಿ, ಪುಟ ವಿನ್ಯಾಸಗೊಳಿಸಿ, ಪುಟಗಳನ್ನು ಪ್ಲೇಟ್‌ಗಳಿಗೆ ಸರಿಯಾಗಿ ಹೊಂದಿಸಿ, ಟ್ರೇಸಿಂಗ್ ಹಾಳೆಗಳನ್ನು ತೆಗೆದು ಅದರ ಮೇಲೆ ಅಂದವಾಗಿ, ಸ್ಫುಟವಾಗಿ, ಮುತ್ತಿನಂಥ ಅಕ್ಷರಗಳಲ್ಲಿ ಮುದ್ರಕರಿಗೆ ಸೂಚನೆಗಳನ್ನು ಬರೆದುಕೊಡುವ ರೀತಿಯೇ ಒಂದು ವಿಸ್ಮಯ..! ಮುದ್ರಕರು ಅವರು ಕೊಡುವ ಸೂಚನೆಗಳನ್ನು ಪಾಲಿಸಿದರೆ ಸಾಕು ಪುಸ್ತಕವು ಅಂದವಾಗಿ ಮುದ್ರಣವಾದಂತೆ…!

ಯಾವುದೇ ಪ್ರಚಾರವಿಲ್ಲದೆ ತನ್ನ ಹೊಣೆಗಾರಿಕೆ ಎನ್ನುವಂತೆ ತಣ್ಣಗೆ ಕೆಲಸ ಮಾಡುವ, ಯಾರ ಮುಖಸ್ಮುತಿ ಮಾಡದೆ ನಿಷ್ಠೂರವಾಗಿ ಮಾತನಾಡುವ ಸುಜ್ಞಾನಮೂರ್ತಿಯವರು ಲೆಕ್ಕಕ್ಕೆ ನಿಲುಕದಷ್ಟು ಲೇಖಕರ, ಪ್ರಕಾಶಕರ ಪುಸ್ತಕಗಳ ಹಸ್ತಪ್ರತಿಗಳನ್ನು ಪರಿಶೀಲಿಸಿ, ಕರಡು ತಿದ್ದಿ, ಅಂದವಾಗಿ ವಿನ್ಯಾಸಗೊಳಿಸಿ, ಮುದ್ರಣಕ್ಕೆ ಅಣಿಮಾಡಿ ಕೊಟ್ಟಿರುವು ಇವರ ಕೈಚಳಕ ನಾಡಿನ ಅನೇಕ ಪುಸ್ತಕಗಳ ಸೊಗಡಿನಲ್ಲಿ ಎದ್ದು ಕಾಣುತ್ತದೆ. ನಾನು ಬರೆಯುವ ಲೇಖನಗಳನ್ನೂ ಅಂತಿಮವಾಗಿ ತಿದ್ದಿ ತೀಡಿ ಒಂದು ರೂಪ ಕೊಡುವವರು ಇವರೆ.

ಪುಸ್ತಕಗಳನ್ನು ಅಗಾಧವಾಗಿ ಓದುವ ಪುಸ್ತಕ ಫಕೀರ ಸುಜ್ಞಾನಮೂರ್ತಿ ಸಿನಿಮಾ ಪ್ರಿಯರೂ ಕೂಡ. ತಮಿಳು, ತೆಲುಗು, ಇಂಗ್ಲಿಷ್ ಇನ್ನಿತರ ಭಾಷೆಗಳ ಚಲನಚಿತ್ರಗಳನ್ನು ನೋಡುವ ಹವ್ಯಾಸ ಇಟ್ಟುಕೊಂಡಿರುವುದು ನನಗೆ ಬಹಳ ಇಷ್ಟ. ಸಿನಿಮಾ ಚರ್ಚೆಗೆ ಬಂದರೆ ಅದನ್ನು ವಿವಿಧ ಆಯಾಮಗಳಿಂದ ವಿಶ್ಲೇಷಿಸಿ, ಅದರ ಗುಣದೋಷಗಳನ್ನು ಒರೆಗೆ ಹಚ್ಚುತ್ತಿರುತ್ತಾರೆ. ಸಿನಿಮಾ ನೋಡುವುದನ್ನು ಒಂದು ಖುಷಿಯಾಗಿ, ಅನುಭವವಾಗಿ ತೆಗೆದುಕೊಂಡರೆ ಅದರ ಮಜಾನೇ ಬೇರೆ ಎಂದು ಪದೇಪದೇ ಹೇಳುತ್ತಲೇ ಇರುತ್ತಾರೆ. ಇವರೊಟ್ಟಿಗೆ ಬಿಡುವಿನ ಸಮಯದಲ್ಲಿ ಸಂಜೆ ಮದಿರಾ ಗೋಷ್ಠಿಗಳಲ್ಲಿ ಚರ್ಚೆ ಮಾಡುತ್ತಾ, ಹರಟೆ ಹೊಡೆಯುತ್ತಾ ಒಂದೆರಡು ಗಂಟೆಗಳ ಕಾಲ ಸಂತೋಷವಾಗಿ ಮಾತುಕತೆಗೆ ಕುಳಿತರೆ ಸಮಯ ಹೋಗುವುದೇ ಗೊತ್ತಾಗುವುದಿಲ್ಲ !

ಇನ್ನು ಮುಂದೆಯೂ ಅವರ ಬಿಡುವಿನ ಸಮಯದಲ್ಲಿ ಕನ್ನಡ ಮತ್ತು ಮುದ್ರಣ ಕ್ಷೇತ್ರದ ಅರಿವಿನ ಹಾದಿಯನ್ನು ಮತ್ತಷ್ಟು ವಿಸ್ತರಿಸಿಕೊಳ್ಳಬೇಕೆಂಬ ಮಹದಾಸೆ ನನಗಿದೆ.

ಇಂದು ವೃತ್ತಿಯಿಂದ ಔಪಚಾರಿಕವಾಗಿ ವಯೋನಿವೃತ್ತಿ ಹೊಂದುತ್ತಿದ್ದಾರೆ. ಇದು ಅವರ ಪ್ರವೃತ್ತಿಯ ನಿವೃತ್ತಿ ಅಲ್ಲ…! ಅವರ ದೇಹಾರೋಗ್ಯ ಮತ್ತು ಮನಸ್ಸು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಸನ್ನದ್ಧವಾಗಿವೆ. ಸುಜ್ಞಾನಮೂರ್ತಿ ಅವರ ಮದರ್‌ಟಂಗ್ ಕನ್ನಡವಾದರೆ ಅದರ್‌ಟಂಗ್ ತೆಲುಗು, ತೆಲುಗಿನಿಂದ ಕನ್ನಡಕ್ಕೆ ಮುಖ್ಯ ವೈಚಾರಿಕ ಕೃತಿಗಳನ್ನು ಅನುವಾದದ ಮೂಲಕ ತಂದಿರುವ ಸುಜ್ಞಾನಮೂರ್ತಿಯವರು ಮುಂದೆಯೂ ಅವರ ಸಾಹಿತ್ಯ ಸೇವೆಯನ್ನು ವಿಸ್ತರಿಸಲಿ. ಹತ್ತಾರು ದೊಡ್ಡ ದೊಡ್ಡ ಪ್ರಶಸ್ತಿಗಳು ಅವರ ಮುಡಿಗೇರಲಿ.

-ಸ್ವಾನ್ ಕೃಷ್ಣಮೂರ್ತಿ, ಬೆಂಗಳೂರು                                *****                                                                  [ಸುಜ್ಞಾನ‌ಮೂರ್ತಿ ಅವರ ಚಿತ್ರವನ್ನು ಕ್ಲಿಕ್ಕಿಸಿದವರು: ಶಿವಶಂಕರ ಬಣಗಾರ, ಹೊಸಪೇಟೆ]