ಅನುದಿನ ಕವನ-೯೧೮, ಕವಿ: ರಾಜೇಂದ್ರ ಪಾಟೀಲ ಹುಬ್ಬಳ್ಳಿ, ಕವನದ ಶೀರ್ಷಿಕೆ: ಅವಳು ಪ್ರಕೃತಿ

ಅವಳು ಪ್ರಕೃತಿ

ಬೆಳಗಿನಿಂದ ಬೈಗಿನವರೆಗೆ
ನಾವು ಬೇಡಿದ್ದು ಬಯಸಿದ್ದು
ಎಲ್ಲ ಕೊಡುತ್ತಾಳೆ
ಆದರೂ ನಾವು ಅವಳ ಕಾಡುತ್ತೇವೆ
ಪೀಡಿಸುತ್ತೇವೆ ಕಿರುಕುಳ ನೀಡುತ್ತೇವೆ
ಮತ್ತೆ ಮತ್ತೆ ಅಮ್ಮನಂತೆ ಸಹಿಸುತ್ತಾಳೆ
ನಮ್ಮನ್ನು ಕಾಪಾಡುತ್ತಾಳೆ;
ಏಕೆಂದರೆ ಅವಳು ಪ್ರಕೃತಿ.

ನೆರಳು ಕೊಡುತ್ತಾಳೆ
ವಾಸಕ್ಕೆ ಮನೆ ಕೊಡುತ್ತಾಳೆ
ಕುಡಿಯಲು ನೀರು ಕೊಡುತ್ತಾಳೆ
ದಣಿದಾಗ ತಂಪೆರೆಯುತ್ತಾಳೆ
ಅಮ್ಮನಂತೆ ಮೈದಡವುತ್ತಾಳೆ
ಹಸಿದಾಗ ಅನ್ನವಿಕ್ಕುತ್ತಾಳೆ
ಆರೈಕೆ ಮಾಡುತ್ತಾಳೆ
ಹಸಿರು ಕೊಡುತ್ತಾಳೆ
ಉಸಿರು ನೀಡುತ್ತಾಳೆ
ಮರೆತವರಂತೆ ಅವಳನ್ನು
ಹೈರಾಣಾಗಿಸುತ್ತೇವೆ;
ಅಮ್ಮನಂತೆ ಮತ್ತೆ ನಮ್ಮನ್ನು
ಸಂತೈಸುತ್ತಾಳೆ;
ಏಕೆಂದರೆ ಅವಳು ಪ್ರಕೃತಿ.

ಕೇಳಿದ್ದನ್ನು ಕೇಳಿದಷ್ಟು ಕೊಡುತ್ತಾಳೆ
ಬೇಡಿದ್ದನ್ನು ಬೇಡಿದ್ದಕ್ಕಿಂತ ತುಸು
ಹೆಚ್ಚೇ ಕೊಡುತ್ತಾಳೆ,
ನಮ್ಮ ಕಿರಿಕಿರಿಯನ್ನೇ
ತುಂಟಾಟ ಎಂದುಕೊಳ್ಳುತ್ತಾಳೆ
ಅವಳ ಕಂಬನಿ
ಕೆನ್ನೆಗಿಳಿದರೂ ತೋರದೆ ಅಮ್ಮನಂತೆ
ನಸುನಗುತ ನಮ್ಮ ಸಲಹುತ್ತಾಳೆ;
ಏಕೆಂದರೆ ಅವಳು ಪ್ರಕೃತಿ.

ಅಮ್ಮನಿಗೂ ಭಾವನೆಗಳಿವೆ
ಅವಳಿಗೂ ಮಕ್ಕಳೊಂದಿಗೆ
ಸುಖಾನುಭವದ ಬದುಕ ಬಾಳುವ
ತವಕ ತಲ್ಲಣಗಳಿವೆ; ಚೆಂದದ
ದಿನಗಳ ಕಳೆಯುತ ನಕ್ಕು ನಲಿಯುವ
ಉತ್ಕಟ ವಾಂಛೆಗಳಿವೆ
ಎಂಬುದ ನಾವು ಅರಿಯಬೇಕಿದೆ
ಅಮ್ಮನ ಮೇಲಿನ ದೌರ್ಜನ್ಯಕೆ
ಕೊನೆ ಹಾಡಬೇಕಿದೆ
ಅಮ್ಮನ ಆರೋಗ್ಯದ ಉಸ್ತುವಾರಿಯ
ನಾವೆಲ್ಲರೂ ನೋಡಿಕೊಳ್ಳಬೇಕಿದೆ
ಪ್ರಕೃತಿಯ ಸಂರಕ್ಷಣೆ ಮಾಡಬೇಕಿದೆ
ಅದು ನಮ್ಮ ಕರ್ತವ್ಯ ಎಂದು
ಅರಿತು ಅಂತೇ ನಡೆದುಕೊಳ್ಳಬೇಕಿದೆ.

– ರಾಜೇಂದ್ರ ಪಾಟೀಲ
ಹುಬ್ಬಳ್ಳಿ

ಪ್ರಕೃತಿ ಚಿತ್ರಗಳು: ಯಜ್ಞ ಆಚಾರ್ಯ, ಮಂಗಳೂರು