ಬೊಗಸೆಯಲ್ಲಿ ನಕ್ಷತ್ರ
ನನ್ನ ಬಡತನದ ದಿನಗಳನು
ಪ್ರೇಮಿಸುವ ನಾನು ನೋವಿನಲ್ಲಿ
ಕರಗುವುದನು ಕಲಿತಿರುವವಳು
ಒದ್ದೆ ಕಣ್ಣೀರಿನಲಿ ಅಡಗಿ ಕುಳಿತ
ದಿನಗಳು ನೆನಪಾಗುವುವು
ದಾರಿ ತೋರಿ ಕೈಹಿಡಿದು ನಡೆಸುವುವು
ಅಮ್ಮನ ಜೊತೆ ಬಾವಿ ನೀರು ಸೇದಿ
ಅಂಗೈಯಲ್ಲಿ ಬೊಬ್ಬೆಗಳೆದ್ದುದಿದೆ
ಬೆಂಕಿ ಒಲೆಗೆ ಮುಖದ ತುಂಬ ಹರಿದಿದ್ದಿದೆ ಬೆವರು
ಹಸಿದ ಹೊಟ್ಟೆ ಬಯಸಿದ್ದಿದೆ ತುತ್ತು ಅನ್ನ
ಅಣಕಿಸುವ ಜನರಿಗೆ ಬಡತನ,
ಮೈಬಣ್ಣ ಎಲ್ಲವೂ ಒಂದು ವಸ್ತು
ಕೂತಲ್ಲೇ ಕೂರುವಂತಿರಲಿಲ್ಲ
ದಾರಿಯುದ್ದಕ್ಕೂ ಚಾಚಿಕೊಂಡಿದ್ದ
ಮುಳ್ಳು ಬೇಲಿಯ ಸರಿಸಿ ನಡೆಯಬೇಕಿತ್ತು
ಬರಿಗಾಲಿಗೆ ಒತ್ತುವ ಕಲ್ಲುಗಳು
ಪಾದಗಳನ್ನು ಬಿರುಸಾಗಿಸಿದ್ದವು
ನನ್ನ ಮನಸ್ಸಿನಲ್ಲಿ ಈಗಲೂ ಉಳಿದಿದೆ
ಕಾಲದಲ್ಲಿ ಹಿಂದೆ ಹೋಗಬೇಕೆಂಬ ಕನಸು
ಹೊಸ ಬಾವಿ ತೋಡಿ ಏತ ಕಟ್ಟಿ ನೀರು ಹರಿಸಬೇಕು
ಮನೆಯಂಗಳದಲಿ ಥರಾವರಿ ಹಸಿರು ಗಿಡ ನೆಡಬೇಕು ಆಗಾಗ ಮೂಡುವ ಅನುಮಾನದ ಮೋಡಗಳ ಸರಿಸಿ
ಶುಭ್ರ ಆಕಾಶ ನೋಡಬೇಕು
ಹೊಸದಾಗಿ ಪ್ರೀತಿ ಗೋಪುರ ಕಟ್ಟಿ
ಅಮ್ಮನ ಪ್ರೀತಿಯ ಬೆರೆಸಿ
ಜಗವನು ಮರೆಯಬೇಕು
ಮೌನದ ಒಲೆ ಊದಿ
ನೋವಿನ ಬೆಂಕಿ ಉರಿಸಿ
ಅಂಗೈ ಅಗಲ ರೊಟ್ಟಿ ಮಾಡಿ
ಇರುಳ ಬೆಳಕಲಿ ರುಚಿಯಾದ ತುಪ್ಪ ಸವರಿ
ಕೈತುತ್ತು ತಿನ್ನಬೇಕು
ಕಥೆ ಕಟ್ಟುವುದರಲಿ ನಿಪುಣೆ ನಾನು
ಬೊಗಸೆಯಲಿ ನಕ್ಷತ್ರಗಳ ಹಿಡಿದು ಜೀವ ತುಂಬಬೇಕು
ಕಳೆದು ಹೋದ ದಿನಗಳನ್ನು ಹಿಡಿದು ತಂದು
ಮನೆಯೆದುರು ಚಪ್ಪರ ಎಬ್ಬಿಸಬೇಕು
-ವಿ.ನಿಶಾಗೋಪಿನಾಥ್, ಬೆಂಗಳೂರು
*****