ಬಳ್ಳಾರಿ, ಜು.14: ಜಿಲ್ಲೆಯ ಪ್ರತಿಷ್ಠಿತ ವಿದ್ಯಾ ಸಂಸ್ಥೆ ವೀರಶೈವ ವಿದ್ಯಾವರ್ಧಕ ಸಂಘದ ಸ್ವತಂತ್ರ ಪ.ಪೂ ಕಾಲೇಜಿನ ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಆಯೋಜಿಸಿದ್ದ ಆಹಾರ ಮೇಳವನ್ನು ಯಶಸ್ವಿಯಾಯಿತು. ವ್ಯವಹಾರ ಕಲೆಯನ್ನು ಮಕ್ಕಳಿಗೆ ಕಲಿಸುವ ಹಾಗು ಅವರಲ್ಲಿ ಸಾಮಾಜಿಕ ಜವಬ್ದಾರಿ ಹೆಚ್ಚಿಸುವ ಸಲುವಾಗಿ ಈ ಆಹಾರ ಮೇಳವನ್ನು ಏರ್ಪಡಿಸಲಾಗಿತ್ತು. ಆಹಾರ ಮೇಳವನ್ನು ಕಾಲೇಜು ಆಡಳಿತ ಮಂಡಳಿಯ ಸದಸ್ಯ ಅಣ್ಣಾ ವಿರುಪಾಕ್ಷಪ್ಪ ಹಾಗು ಮುದ್ದನ ಗೌಡ ಅವರು ಉದ್ಘಾಟಿಸಿದರು. ಮೇಳದ ಪ್ರಸ್ತುತತೆ ಹಾಗು ಮಹತ್ವವನ್ನು ಕುರಿತಾಗಿ ಪ್ರಾಂಶುಪಾಲ ಡಾ.ದೇವೇಂದ್ರಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾಲೇಜಿನ ಎಲ್ಲಾ ಸಿಬ್ಬಂದಿಯವರು ಆಹಾರಮೇಳದ ಮಳಿಗೆಗಳನ್ನು ಉದ್ಘಾಟಿಸಿದರು. ಸುಮಾರು ೧೧ ವ್ಯಾಪಾರ ಮಳಿಗೆಗಳಿದ್ದು ಶುಚಿ ರುಚಿಯಾದ ಪಾನಿಪೂರಿ, ಬೇಲ್ ಪೂರಿ ದೈಪೂರಿ ಗೋಬಿ ಮಂಚೂರಿ, ಮೋಮೋಸ್ ಪೋಟೋಟೋ ಚಿಪ್ಸ್ ನ್ಯೂಡಲ್ಸ್ ,ಟಮೋಟೋ ಸ್ಲೈಸ್, ಮಿಲ್ಕ ಶೇಕ್ ,ಕಪ್ ಕೇಕ್ಸ್ ತಂಪು ಪಾನೀಯಗಳು ಹಾಗು ಸ್ವಾದಿಷ್ಟ ಗುಲಾಬ್ ಜಾಮೂನ್ ಮುಂತಾದ ೫೦ ಕ್ಕೂ ಹೆಚ್ಚು ತಿಂಡಿ ತಿನಿಸುಗಳು ಮಾರಾಟ ಮಳಿಗೆಗಳಲ್ಲಿ ಮಾರಾಟಕ್ಕಿದ್ದವು. ವಿದ್ಯಾರ್ಥಿಗಳೇ ತಯಾರು ಮಾಡಿ ಅವರೇ ಮಾರಾಟ ಮಾಡುವ ,ಲಾಭ ನಷ್ಟ ಲೆಕ್ಕ ಹಾಕುವ, ಗ್ರಾಹಕರನ್ನು ತಮ್ಮ ಅಂಗಡಿಗಳತ್ತ ಸೆಳೆಯುವ ಅವರೊಂದಿಗೆ ಸೌಜನ್ಯಯುತವಾಗಿ ಮಾತನಾಡುವ ಒಂದು ವಿಭಿನ್ನ ವಿನೂತನ ಕಾರ್ಯಕ್ರಮವನ್ನು ಮೊದಲ ಬಾರಿಗೆ ಕಾಲೇಜಿನಲ್ಲಿ ಆಯೋಜಿಸಲಾಗಿತ್ತು. ಕಾರ್ಯಕಾರಿ ಸಮಿತಿ ಸದಸ್ಯ ಕೋರಿ ವಿರುಪಾಕ್ಷಪ್ಪ, ಆಡಳಿತ ಮಂಡಳಿ ಸದಸ್ಯರು ಸಿಬ್ಬಂದಿವರ್ಗದವರು ಎಲ್ಲಾ ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಿಂಡಿ ಖರೀದಿಸಿ ಉಪಹಾರ ಸವಿದರು. ಒಂದು ವಾರದಿಂದ ತಯಾರಿ ಮಾಡಿಕೊಂಡಿದ್ದ ವಿದ್ಯಾರ್ಥಿಗಳ ಶ್ರಮ ಸಾರ್ಥಕವೆನಿಸಿತು. ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ ವಾಣಿಜ್ಯ ವಿಭಾಗದ ಎಲ್ಲಾ ಉಪನ್ಯಾಸಕರ ಕಾರ್ಯವನ್ನು ಗಣ್ಯರು ಅಭಿನಂದಿಸಿದರು.