ಒಂದಿಷ್ಟು ಸಾಲುಗಳು!!
ಮಿಂಚಿನಂತೆ
ಹೊಳೆಯುವ
ಅವಳ ನಗು
ಬೆರಗು ಹುಟ್ಟಿಸುತ್ತದೆ
ಅವಳೊಳಗಿನ
ಮೋಡಗಳು
ಕದಡುವುದೇ ಇಲ್ಲ!
ಹೂವಿನ ನಗೆಯ ಕಂಡು
ಲೋಕ
ಮೆಚ್ಚುಗೆಯ ಮಾತಾಡುವಾಗ
ಅವಳು
ಬೇರುಗಳ ಭದ್ರತೆಗೆ
ಹೆಣಗುತ್ತಾಳೆ!
ಭೂಮಿಯಷ್ಟು ಸಹನೆ
ಎನ್ನುವಾಗೆಲ್ಲ
ಸರಹೊತ್ತಿನಲ್ಲಿ
ಅವುಡುಗಚ್ಚಿ ಬಿಕ್ಕುವುದನ್ನು
ನೆನೆಯುತ್ತಾಳೆ!
ಸುತ್ತಲಿನ ಸಾವುಗಳಿಗೆ
ಸುತ್ತಲಿನವರು ಅಳುವಾಗ
ದಿನವೂ ಸತ್ತು ಬದುಕುವ
ಅವಳು
ತಣ್ಣಗೆ ನಗುತ್ತಾಳೆ!
ಬಾಗಿಯೂ ಬೀಗದೆ
ಬೀಗದೆಯೂ ಎತ್ತರಕ್ಕೇರಿ
ಆಳಕ್ಕಿಳಿಯುವ
ಅವಳೊಳಗೆ
ಪ್ರಶ್ನೆಗಳೇ ಉತ್ತರಗಳು
ಉತ್ತರಗಳೇ ಪ್ರಶ್ನೆಗಳು!
-ರಂಹೊ(ರಂಗಮ್ಮ ಹೊದೇಕಲ್) ತುಮಕೂರು
*****